Bapuji Institute of Hi-Tech Education ವಿಶ್ವದ ಅತ್ಯಂತ ಗರಿಷ್ಠ ಮಟ್ಟದ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ದೇಶ ಭಾರತವಾಗಿದ್ದು ಮುಂದಿನ ಶತಮಾನ ಭಾರತದ ಶತಮಾನವಾಗಲಿದೆ ಎಂದು ಹುಬ್ಬಳ್ಳಿಯ ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾನಿಲಯದ ಮ್ಯಾನೇಜ್ಮೆಂಟ್ ಕಾಲೇಜಿನ ನಿರ್ದೇಶಕ ಡಾ.ಎಂ ಆರ್ ಶೋಲಾಪುರ್ ಹೇಳಿದರು.
ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ನಿನ ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ಏರ್ಪಾಡಾಗಿದ್ದ ರಾಜ್ಯಮಟ್ಟದ ಐದನೇ ‘ವಾಣಿಜ್ಯೋತ್ಸವ-2023’ ನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರಸ್ತುತ 4 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿ ಯಾಗಿರುವ ಭಾರತ ಶೀಘ್ರದಲ್ಲೇ 5 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಲಿದ್ದು ಈ ಅಭಿವೃದ್ಧಿಯಲ್ಲಿ ವಾಣಿಜ್ಯೋದ್ಯಮ ರಂಗದ ಪಾತ್ರ ಮಹತ್ತರವಾಗಿದೆ, ಹೀಗಾಗಿ ವಾಣಿಜ್ಯಶಾಸ್ತ್ರ ಪದವೀಧರರಿಗೆ ಬೇಡಿಕೆಯೂ ಅಪಾರವಾಗಿದೆ, ಪ್ರಸ್ತುತ ಶೇಕಡ 7.6 ರ ದರದಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿರುವ ಭಾರತ ಶೇಕಡ 4.9 ಇರುವ ಚೈನಾ ವನ್ನು ಹಿಂದಕ್ಕೆ ಇಟ್ಟಿದ್ದು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಾದ ಅಮೆರಿಕ ಜಪಾನ್ ಜರ್ಮನಿ ಗಳನ್ನೂ ಮೀರಿ ಬೆಳೆಯುವ ಕಾಲ ದೂರವಿಲ್ಲ, ನಮ್ಮ ಭಾರತ ದೇಶದಲ್ಲಿ ವಾಣಿಜ್ಯ ವ್ಯವಹಾರ ಹಾಗೂ ಧರ್ಮ ಇವೆರಡೂ ಸನಾತನ ಕಾಲದಿಂದಲೂ ಒಟ್ಟಾಗಿ ಬೆಳೆದು ಬಂದಿವೆ, ನಮ್ಮ ಆರ್ಥಿಕ ಚಟುವಟಿಕೆಗಳು ಅನಾದಿಕಾಲದಿಂದಲೂ ಧರ್ಮಾಧಾರಿತವಾಗಿದ್ದವು ಎಂದರು. ಆರ್ಥಿಕ ವ್ಯವಸ್ಥೆಯು ವಾಣಿಜ್ಯ ಮತ್ತು ವ್ಯಾಪಾರ ಆಧಾರಿತವಾಗಿದ್ದು ಆರ್ಥಿಕ ಅಭಿವೃದ್ಧಿಯು ನಾಗರಿಕತೆಯ ಅಭಿವೃದ್ಧಿಯ ಸಂಕೇತವೂ ಹೌದು, ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳು ವಾಣಿಜ್ಯ ಕ್ಷೇತ್ರದ ಜ್ಞಾನ ವಿಸ್ತರಿಸಿಕೊಳ್ಳಬೇಕು, ಅಂಕ ಗಳಿಕೆಗಷ್ಟೇ ಪ್ರಾಧಾನ್ಯತೆ ಕೊಡದೆ ಕೌಶಲ್ಯ ಅಭಿವೃದ್ಧಿಗೂ ಪ್ರಧಾನ್ಯತೆ ಕೊಡಬೇಕು, ವಿಷಯಜ್ಞಾನ ಇದ್ದರೆ ಸಾಲದು ವಿವರಿಸುವ ಮತ್ತು ಅಳವಡಿಸಿಕೊಳ್ಳುವ ಕೌಶಲ್ಯವೂ ಅವಶ್ಯ, ಇದಕ್ಕಾಗಿ ನಿತ್ಯ ವೃತ್ತ ಪತ್ರಿಕೆ ಓದಬೇಕು, ಜಾಗತಿಕ ತೈಲ, ಹೂಡಿಕೆ, ಮಾರುಕಟ್ಟೆ ಪರಿಸ್ಥಿತಿಯ ಮಾಹಿತಿಗಳನ್ನು ಹೊಂದುತ್ತಿರಬೇಕು, ಸೇವಾ ಕ್ಷೇತ್ರವು ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ, ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳು ಭವಿಷ್ಯದ ಮಹಾನ್ ಉದ್ಯಮಿಗಳು ಆಗುವ ಕನಸನ್ನು ಕಾಣಬೇಕು ಎಂದರು.
ದಾವಣಗೆರೆ ಜಿಲ್ಲೆಯಂತಹ ಪರಿಸರದಲ್ಲೂ ಕಾಶ್ಮೀರದ ಬೆಳೆಯಾದ ಕೇಸರಿಯನ್ನು ಬೆಳೆಯಬಹುದೆಂಬ ಮಾದರಿಯನ್ನು, ನಮ್ಮ ಸನಾತನ ಸಂಸ್ಕೃತಿಯ ಬಿಂಬಿಸುವ ಹಳೆಯ ಕಾಲದ ನಾಣ್ಯಗಳ ಪ್ರದರ್ಶನ ಮುಂತಾದವು ಈ ವಾಣಿಜ್ಯೋತ್ಸವದಲ್ಲಿ ಏರ್ಪಾಡಾಗಿರುವುದು ಮಹತ್ತರವಾಗಿದೆ ಎಂದರು.
ಸ್ವಾಗತ ಕೋರುತ್ತಾ ಪ್ರಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ ಹೆಚ್ ವಿ ಯವರು ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ ಪ್ರದರ್ಶನ ಹಾಗೂ ಪ್ರಯೋಗದ ಅವಕಾಶಗಳು ಇವೆ ಆದರೆ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಇಂತಹ ವಾಣಿಜ್ಯೋತ್ಸವಗಳಿಂದ ಮಾತ್ರ ಅವಕಾಶ ಲಭ್ಯ, ರಾಜ್ಯಮಟ್ಟದ ಈ ವಾಣಿಜ್ಯೋತ್ಸವದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು ದೂರದ ಬಾಗಿಲುಕೋಟೆಯಿಂದಲೂ ಸಹ ಬಂದಿದ್ದಾರೆ, ವಾಣಿಜ್ಯ ಉದ್ಯಮ ಮಾರುಕಟ್ಟೆ ಹಾಗೂ ಸಾಂಸ್ಕೃತಿಕ ಕೌಶಲ್ಯಗಳು ಇಲ್ಲಿ ಬಿಂಬಿತವಾಗುತ್ತಿವೆ ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಾಂಶುಪಾಲ ಡಾ.ಬಿ. ವೀರಪ್ಪನವರು ವಾಣಿಜ್ಯ ಶಾಸ್ತ್ರ ವಿಭಾಗವು ಪ್ರಸ್ತುತ ಅತ್ಯಂತ ಬೇಡಿಕೆ ಇರುವ ಶಿಕ್ಷಣ ವಿಭಾಗವಾಗಿದೆ, ಕೃಷಿಕರ ಮಕ್ಕಳು ಸಹಾ ವಾಣಿಜ್ಯ ಪದವಿಗಾಗಿ ಬರುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು. ಡಾ.ನವೀನ್ ನಾಗರಾಜ್, ಡಾ.ಸುಜಿತ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
Bapuji Institute of Hi-Tech Education ವಿದ್ಯಾರ್ಥಿಗಳಾದ ಸಂಜನಾ ವಿ ಎನ್ ಹಾಗೂ ಅದಿಲ್ ಅತ್ತರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಪಲ್ಗುಣಿ ಮತ್ತು ಪ್ರಜ್ಞಾ ಹಾಡಿದರು. ಅತಿಥಿಗಳ ಪರಿಚಯವನ್ನು ಭೂಮಿಕಾ ಜಿ ನಾಡಿಗರ್ ಹಾಗೂ ಎನ್ ಸಿ ಪ್ರಜ್ಞಾ ಮಾಡಿದರು. ವಂದನೆಯನ್ನು ಪ್ರೊ. ಮಂಜುನಾಥ ಬಿ.ಬಿ. ಅರ್ಪಿಸಿದರು.
-ಚಿತ್ರ ಹಾಗೂ ವರದಿ ಎಚ್ ಬಿ ಮಂಜುನಾಥ-