AIDS awareness Campaign ಪ್ರತಿ ಗರ್ಭಿಣಿಯರನ್ನು ಮೊದಲನೇ ಮೂರು ತಿಂಗಳ ಅವಧಿಯಲ್ಲಿ ಹೆಚ್‍ಐವಿ ಪರೀಕ್ಷೆಗೆ ಒಳಪಡಿಸಿ ವರದಿಯನ್ನು ಅಪ್‍ಡೇಟ್ ಮಾಡಬೇಕು. ಏಡ್ಸ್ ದುರ್ಬಲ ವರ್ಗದಿಂದ ಈ ಸೋಂಕು ಹೆಚ್ಚಾಗಿ ಹರಡುವ ಕಾರಣ ಇದಕ್ಕಾಗಿಯೇ ಇರುವ 6 ಎನ್‍ಜಿಓ ಗಳು ಇಂತಹವನ್ನು ಗುರುತಿಸಿ, ಕಾಲ ಕಾಲಕ್ಕೆ ಪರೀಕ್ಷೆಗೊಳಪಡಿಸಿ, ಸೂಕ್ತ ಚಿಕಿತ್ಸೆ ಮತ್ತು ಈ ಬಗ್ಗೆ ಜಾಗೃತಿ-ಶಿಕ್ಷಣವನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್. ಸೇಲ್ವಮಣಿಯವರು ತಿಳಿಸಿದರು.
2022-23 ರಲ್ಲಿ 265 ಮತ್ತು 2023-24 ರಲ್ಲಿ ಈವರೆಗೆ 111 ಹೆಚ್‍ಐವಿ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ 8 ವಿದ್ಯಾರ್ಥಿಗಳಿಗೆ ಹೆಚ್‍ಐವಿ ಪಾಸಿಟಿವ್ ಇರುವುದು ಪತ್ತೆಯಾಗಿದೆ, ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಲೇಜುಗಳಲ್ಲಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮಗಳು ಹೆಚ್ಚಬೇಕು. ಇದಕ್ಕೆ ಕಾರಣವಾಗುತ್ತಿರುವ ಮೂಲವನ್ನು ಹುಡುಕಿ ನಿಯಂತ್ರಣ ಕ್ರಮ ವಹಿಸಬೇಕು ಎಂದರು.
ಜಿಲ್ಲಾ ಕೀಟಜನ್ಯ ರೋಗ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ಮಾತನಾಡಿ, ಹವಾಮಾನ ಬದಲಾವಣೆಯಿಂದ ಮಾನವನ ಆರೋಗ್ಯದ ಮೇಲೆ ಅನೇಕ ಪರಿಣಾಮಗಳಾಗುತ್ತಿದ್ದು, ಇದರ ಕುರಿತು ಜಾಗೃತಿ ಹಾಗೂ ನಿಯಂತ್ರಿಸಲು 2019 ರಲ್ಲಿ ಕೇಂದ್ರ ಸರ್ಕಾರ ನ್ಯಾಷನಲ್ ಪ್ರೋಗ್ರಾಮ್ ಆನ್ ಕ್ಲೈಮೇಟ್ ಚೇಂಜ್ ಕಾರ್ಯಕ್ರಮ ಜಾರಿಗೊಳಿಸಿದೆ.
ಹವಾಮಾನ ಬದಲಾವಣೆಯಿಂದ ಶಾಖ ತರಂಗ, ಚಂಡ ಮಾರುತ, ತೀವ್ರ ಉಸಿರಾಟದ ಖಾಯಿಲೆಗಳು ಇತರೆ ದುಷ್ಪರಿಣಾಮಗಳು ಹೆಚ್ಚುತ್ತಿದ್ದು, ಸಂಶೋಧನೆ ಪ್ರಕಾರ ವಿಶ್ವದಲ್ಲಿ 3.6 ಬಿಲಿಯನ್ ಜನರು ಹವಾಮಾನ ವೈಪರೀತ್ಯದಿಂದಾಗುವ ಖಾಯಿಲೆಗಳಿಗೆ ಒಳಗಾಗುವ ಹಾಗೂ 2023 ರ ಹೊತ್ತಿಗೆ 2.5 ಲಕ್ಷ ಹೆಚ್ಚುವರಿ ಸಾವು ಇದರಿಂದ ಸಂಭವಿಸಬಹುದು ಎಂದು ಸಂಶೋಧನೆಗಳು ಹೇಳುತ್ತಿವೆ. ಆದ್ದರಿಂದ ಈ ಕಾರ್ಯಕ್ರಮದಡಿ ಈ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಲ್ಟಿಸೆಕ್ಟರಲ್ ಟಾಸ್ಕ್‍ಫೋರ್ಸ್ ಸಮಿತಿ ರಚಿಸಬೇಕೆಂದರು.
AIDS awareness Campaign ಜಿಲ್ಲಾಧಿಕಾರಿಗಳು ಸಮಿತಿ ರಚನೆ ಮಾಡಿ, ಕಾರ್ಯಕ್ರಮದನ್ವಯ ಎಲ್ಲ ಆಸ್ಪತ್ರೆಗಳಲ್ಲಿ ಉಸಿರಾಟದ ಖಾಯಿಲೆಗಳನ್ನು ಆನ್‍ಲೈನ್ ಎಂಟ್ರಿ ಮಾಡಬೇಕು. ಇತರೆ ದುಷ್ಪರಿಣಾಮ ತಡೆಗಟ್ಟಲು ನಿಯಮಾನುಸಾರ ಕ್ರಮ ವಹಿಸಬೇಕೆಂದರು.
ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಸುಜಾತ ಕೆಆರ್, ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲೆಯ ವಿವಿಧ ಕಾರ್ಯಕ್ರಮಗಳ ಅನುಷ್ಟಾನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.