Kateel Ashok Pai Memorial Institute ಸೆ.12ರಂದು ಶಿವಮೊಗ್ಗದ ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಯು ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಆಚರಿಸಿತು.
ಈ ದಿನದ ಪ್ರಯುಕ್ತ ಕಾಲೇಜಿನ ಮನೋವಿಜ್ಞಾನ ಹಾಗೂ ಕ್ಲಿನಿಕಲ್ ಸೈಕಾಲಜಿ ವಿದ್ಯಾರ್ಥಿಗಳು ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ನಡೆಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಶ್ರೀ ಸಿ.ಎನ್.ಚಂದನ್ ರವರು ಸಮಾರೋಪ ನುಡಿಗಳನ್ನಾಡಿದರು.
ಅವರು ಆತ್ಮಹತ್ಯೆ ತಡೆಯೆಂಬುದು ‘ನನ್ನಂತೆ ನೀನು ಬದುಕು’ ಎಂಬ ಸಂದೇಶವನ್ನು ನೀಡಬಲ್ಲ ಒಂದು ಮಾನವೀಯ ಪರಿಕಲ್ಪನೆ ಆತ್ಮಹತ್ಯೆಯೊಂದು ಮನೋ ಸಾಮಾಜಿಕ ಸಂಕೀರ್ಣ ಸಮಸ್ಯೆ. ಕಾನೂನಿನಲ್ಲಿ ಇದೊಂದು ಅಪರಾಧವೆಂದು ಪರಿಗಣಿಸಲ್ಪಟ್ಟರೂ ಆತ್ಮಹತ್ಯೆಯ ಯೋಚನೆಗಳು ಒಂದು ಮಾನಸಿಕ ಸಮಸ್ಯೆಯೂ ಹೌದು ಆದುದರಿಂದ ಅತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿಗಳಿಗೆ ಮೂಲಭೂತವಾಗಿ ಮಾನಸಿಕ ತಜ್ಞರಿಂದ ಅನುಭೂತಿಯುಳ್ಳ ಚಿಕಿತ್ಸೆಯು ದೊರಕಬೇಕು. ಆತ್ಮಹತ್ಯೆ ತಡೆಯುವಲ್ಲಿ ಸಮಾಜದ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಮಾತನಾಡಬೇಕು ಮತ್ತು ವರ್ತಿಸಬೇಕು. ಅತಿಯಾದ ಅಸೂಯೆ, ಅತಿಯಾದ ನಿರೀಕ್ಷೆಗಳು ಹಾಗೂ ಬದುಕಿನ ಕುರಿತು ಅನಗತ್ಯ ಆಲೋಚನೆಗಳು ಆತ್ಮಹತ್ಯೆಗೆ ಕಾರಣ ಅಲ್ಲದೆ ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಸ್ವಾರ್ಥಪರತೆ ಅನಗತ್ಯ ವಸ್ತುಗಳ ಕುರಿತು ಅತಿ ಆಸೆ ಹಾಗೂ ವಿವಿಧ ಆಮಿಷಗಳಿಗೆ ಬಲಿಯಾಗುವ ಪರಿಸ್ಥಿತಿಗಳು ಆತ್ಮಹತ್ಯೆಯ ಪ್ರಮಾಣವನ್ನು ಹೆಚ್ಚಿಸಿದೆ. ಆದುದರಿಂದ ಜೀವನ ಮೌಲ್ಯದ ಕುರಿತು ಸಂಭಾಷಣೆ, ಪರಸ್ಪರ ಅವಲಂಬನೆಯ ಕುರಿತು ಗೌರವ ಋಣಾತ್ಮಕತೆಯಿಂದ ದೂರವಿರಬಲ್ಲ ಮನಸ್ಥಿತಿ ಹೆಚ್ಚಾಗಬೇಕಿದೆ. ಇದೆಲ್ಲದರ ಜೊತೆಗೆ ಮನೋಚಿಕಿತ್ಸೆಯ ಸೌಲಭ್ಯ ಹಾಗೂ ಆಪ್ತಸಮಾಲೋಚನೆ ಎಲ್ಲಾ ಕ್ಷೇತ್ರಗಳಲ್ಲೂ ದೊರಕುವಂತಾಗಬೇಕು ಎಂದು ಹಿರಿಯ ನ್ಯಾಯಾಧೀಶರು ತಿಳಿಸಿದರು. ಕಾರ್ಯಕ್ರಮದಲ್ಲಿ ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಪುಷ್ಟಲತಾ ರವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಆತ್ಮಹತ್ಯೆಯ ಯೋಚನೆಗಳುಳ್ಳ ವ್ಯಕ್ತಿಯನ್ನು ಗುರುತಿಸುವ ಮತ್ತು ವಿಶ್ಲೇಷಿಸುವ ಕಾರ್ಯದ ಮೂಲಕ ಮಾನಸಿಕ ತಜ್ಞರು ಅದನ್ನು ತಡೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎಂ.ಸಿ.ಸಿ.ಎಸ್. ನ ನಿರ್ದೇಶಕರಾದ ಡಾ. ರಾಜೇಂದ್ರ ಚನ್ನಿರವರು ಮಾತನಾಡಿ ಪ್ರತಿ 60 ಸೆಕೆಂಡುಗಳಂತೆ ವಿಶ್ವಾದ್ಯಂತ ನಡೆಯುವ ಆತ್ಮಹತ್ಯೆಯ ಸಮಸ್ಯೆಯು ಒಂದು ತೀವ್ರತರವಾದ ಸಮಸ್ಯೆ ಅದನ್ನು ತಡೆಯುವುದು ಅಗತ್ಯ ಎಂದರು ಕಾರ್ಯಕ್ರಮದಲ್ಲಿ ಮಾನಸ ಸಂಸ್ಥೆಯ ಡಾ.ರಜನಿ ಎ ಪೈ, ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಂಯೋಜಕರಾದ ಸಿಸ್ಟರ್ ಮಾರಿ ಇವ್ಲಿನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kateel Ashok Pai Memorial Institute ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಕೆ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕು ಆಲಿಯಾ ಹಾಗೂ ದ್ವಿತೀಯ ಬಹುಮಾನವನ್ನು ಕು. ಅಕ್ಷತಾ ಕಾಮತ್ ಪಡೆದರು.