ಸಂಸಾರದ ಸಾಗರವನ್ನು ದಾಟಬೇಕಾದರೆ ಭಗವಂತನ ಪಾದವೇ ನೌಕೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ದೇವರ ಪಾದವನ್ನೇ ನೌಕೆಯಾಗಿಸಿಕೊಂಡು ನಾವು ದಾಟಬೇಕಿರುವುದರಿಂದ ದೇವರ ಬಗ್ಗೆ ನಂಬಿಕೆ ಇಡುವುದು ಮುಖ್ಯ. ಸಕಾಮ ಕರ್ಮಗಳನ್ನು ಮಾಡಿ ಸ್ವರ್ಗವನ್ನು ಪಡೆದರೂ ಶಾಶ್ವತವಲ್ಲ. ಸ್ವಲ್ಪಕಾಲದಲ್ಲಿ ಮತ್ತೆ ಜನನ ಮರಣದ ಚಕ್ರದಲ್ಲಿ ಸಿಲುಕಬೇಕಾಗುತ್ತದೆ ಎಂದರು.
ಯಾವ ಅಪೇಕ್ಷೆ ಇಲ್ಲದೆ ದೇವರ ಸೇವೆ ಮಾಡಬೇಕು. ಸಕಾಮ ಕರ್ಮಗಳನ್ನು ಮಾಡುವವರೆಲ್ಲ ದುರ್ಜನರು ಎಂದರ್ಥವಲ್ಲ. ಆದರೆ ಅವರಲ್ಲಿ ಪಕ್ವತೆ ಇರುವುದಿಲ್ಲ. ಇಷ್ಟಾರ್ಥಕ್ಕಾಗಿ ದೇವರಲ್ಲಿ ಭಕ್ತಿ ಮಾಡುತ್ತಾರೆಯೇ ಹೊರತು ಸ್ವಾಭಾವಿಕವಾದ ಭಕ್ತಿ ಅವರಲ್ಲಿ ಇರುವುದಿಲ್ಲ. ದೇವರ ಉಪಕಾರ ಸ್ಮರಣೆ ಮಾಡಿಕೊಳ್ಳುತ್ತ ಸ್ವಾಭಾವಿಕವಾದ ಭಕ್ತಿ ಮಾಡಬೇಕು. ಆಗ ದೇವರು ಮೋಕ್ಷವನ್ನೇ ಕೊಡುತ್ತಾನೆ ಎಂದರು.
Uttaradi Mutt ಅನಂತ ಜನ್ಮಗಳ ಪುಣ್ಯದಿಂದ ಭಗವಂತ ನಮಗೆ ಉತ್ತಮವಾದ ಜನ್ಮ ಕೊಟ್ಟಿದ್ದಾನೆ. ದೇವರನ್ನು ನೋಡಲು, ಅವನ ಬಗ್ಗೆ ಕೇಳಿ ತಿಳಿಯಲು, ಅವನ ಮಹಾತ್ಮೆ ಓದುವ, ಓದಿ ಸಂತೋಷ ಪಡುವ ಅವಕಾಶ ಕಲ್ಪಿಸಿದ್ದಾನೆ. ಇಂತಹ ಜನ್ಮದಲ್ಲಿ ನಾವು ಅಂಧಕಾರವನ್ನು ದೂರ ಮಾಡಿಕೊಳ್ಳಬೇಕು ಎಂದರು.
ಪಂಡಿತರಾದ ಭೀಮಸೇನಾಚಾರ್ಯ ಆತಕೂರು ಪ್ರವಚನ ನೀಡಿದರು. ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಪ್ರಕಾಶಾಚಾರ್ ಸವಣೂರು ಮೊದಲಾದವರಿದ್ದರು.