Kateel Ashok Pai Coollege ಶಿವಮೊಗ್ಗ ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕನ್ನಡ ವಿಭಾಗದ ಸಾಹಿತ್ಯ ಸಹೃದಯ ವೇದಿಕೆಯಿಂದ ‘ಪುಸ್ತಕ ಓದು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಅಕ್ಷರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀಯುತ ಸುರೇಶ್ ರವರು ಸಾಹಿತ್ಯ ಆಸಕ್ತಿಯು ನಮ್ಮನ್ನು ಸಹೃದಯರನ್ನಾಗಿಸುತ್ತದೆ, ಒಳ್ಳೆಯ ಕಥೆ, ಕಾದಂಬರಿ, ಕವನಗಳ ಓದಿನಲ್ಲಿ ತಲ್ಲಿನರಾದಾಗ ನಮ್ಮ ಹೃದಯವು ಹಲವು ವಿಚಾರಗಳನ್ನು ಸ್ವೀಕರಿಸಿ ಹೃದಯವಂತಿಕೆಯನ್ನು ಬೆಳೆಸಿಕೊಳ್ಳುವಂತೆ ಮಾಡುತ್ತದೆ.
ಜನಪದ ಸಾಹಿತ್ಯ, ಹಳೆಗನ್ನಡ ಹಾಗೂ ಈಗಿನ ನವ್ಯ ಸಾಹಿತ್ಯ ಎಲ್ಲವೂ ಉಪಯುಕ್ತ. ಎಲ್ಲಾ ಶಾಸ್ತ್ರ, ವಿಜ್ಞಾನ, ತತ್ವಗಳೂ ಸಾಹಿತ್ಯದಲ್ಲಿ ಅಡಕವಾಗಿದೆ ಎಂದು ಹೇಳಿದರು.
ಮತ್ತೊಬ್ಬ ವಿಶೇಷ ಆಹ್ವಾನಿತರಾದ ಜೆ.ಪಿ.ಎನ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ಯುತ ಅಭಿಷೇಕ್ ರವರು ಸಾಹಿತ್ಯದ ಆಸಕ್ತಿ ಇಲ್ಲವಾದಲ್ಲಿ ನಾವು ಯಂತ್ರಗಳ ದಾಸರಾಗುವ ಅಪಾಯವಿದೆ ಎಂದು ಕಿವಿಮಾತು ಹೇಳಿದರು.
Kateel Ashok Pai Coollege ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಹರ್ಷವರ್ಧನ್, ಸಿಹಾನ್, ಸಂಧ್ಯಾ, ನಿಸರ್ಗ ಹಾಗೂ ದೀಪ್ತಿ ಜಾನಪದ ಗೀತೆಗಳನ್ನು ಹಾಡಿದರು, ವೈಷ್ಣವಿ ಸಾರಾ ಅಬೂಬಕ್ಕರ್ ರವರ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯ ಕುರಿತು ವಿಷಯ ಮಂಡಿಸಿದರು.
ರಾಧಿಕಾರವರು ಯು.ಆರ್.ಅನಂತಮೂರ್ತಿಯವರ ‘ಅವಸ್ಥೆ’ ಕಾದಂಬರಿಯನ್ನು ತಾನು ಓದಿದ ಅನುಭವದೊಂದಿಗೆ ಹಂಚಿಕೊಂಡರು, ಸಿಂಚನ ಕುವೆಂಪುರವರ ‘ಹೋಗುವೆನು ನಾ’ ಕವನವನ್ನು ವಾಚಿಸಿದರು, ಪ್ರಜ್ಞಾದೀಪ್ತಿ ‘ಕರುನಾಳು ಬಾ ಬೆಳಕೆ’ ಕವನ ಗಾಯನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಡಾ.ಸಂಧ್ಯಾ ಕಾವೇರಿ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಸಂತೋಷ್ ಕುಮಾರ್ ಎಸ್.ಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಪ್ರೀತಿ ನಿರೂಪಣೆಯನ್ನು ಮಾಡಿದರು, ಭಾರ್ಗವಿ ಪ್ರಾರ್ಥನೆಯನ್ನು ಹಾಡಿದರು, ಅನುಷಾ ಸ್ವಾಗತಿಸಿದರು, ಚೈತ್ರ ವಂದಿಸಿದರು.