Sunday, November 24, 2024
Sunday, November 24, 2024

Sahana Chethana Natyalaya Shivamogga ನೃತ್ಯ ಕದಂಬಕಮ್… ಹೆಜ್ಜೆ ಹಿಡಿದು

Date:

Sahana Chethana Natyalaya Shivamogga ಸಾಹಿತ್ಯ ಸಂಗೀತ ಕಲಾ ವಿಹೀನಃ ಸಾಕ್ಷಾತ್ ಪಶುಃ ಪುಚ್ಛ ವಿಷಾಣ ಹೀನಃ ಎಂಬ ಸುಭಾಷಿತದಲ್ಲಿ ಯಾರಿಗೆ ಸಾಹಿತ್ಯ ಸಂಗೀತ ಕಲೆಗಳಲ್ಲಿ ಆಸಕ್ತಿ ಇರುವುದಿಲ್ಲವೋ ಆತ ಕೊಂಬು ಮತ್ತು ಬಾಲವಿಲ್ಲದ ಸಾಕ್ಷಾತ್ ಪಶುವಿಗೆ ಸಮಾನ ಎಂದು ಹೇಳಿದೆ. ಇದು ಮನುಷ್ಯನಲ್ಲಿ ಇರಬೇಕಾದ ಕಲಾಸಕ್ತಿಯ ಕುರಿತಾಗಿ ತಿಳಿಸುತ್ತದೆ. ನೃತ್ಯ ಕಲೆ ಎನ್ನುವುದು ದಕ್ಷಿಣ ಭಾರತದ ಒಂದು ಪಾರಂಪರಿಕ ಕಲೆ. ಇದು ಮನೋರಂಜನೆಗಷ್ಟೇ ಸೀಮಿತವಾಗಿರದೆ ಆತ್ಮ ರಂಜನೆಯನ್ನೂ ಸಹ ನೀಡುತ್ತದೆ. ಭರತನಾಟ್ಯ ಈ ನೃತ್ಯ ಪ್ರಕಾರದಲ್ಲಿ ಅತ್ಯಂತ ಪ್ರಮುಖವಾದುದಾಗಿದೆ. ಇದು ಭಾವ, ಹಸ್ತ ಮುದ್ರೆ, ತಾಳ, ನೃತ್ಯ, ನಟರಾಜ ಪ್ರತಿಮೆ, ಉಡುಗೆ, ಪ್ರದರ್ಶಕರು ಎಂಬ ಅಂಶಗಳನ್ನು ಒಳಗೊಂಡಿದೆ. ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಶಾಸ್ತ್ರೀಯ ನೃತ್ಯದ ಪಾಲು ಹಿರಿದು. ಅದನ್ನು ಬಹಳ ಶ್ರದ್ಧೆಯಿಂದ ಮಾಡಿಕೊಂಡು ಬರುತ್ತಿರುವ ಸಂಸ್ಥೆ ಶಿವಮೊಗ್ಗದ ಸಹಚೇತನ ನಾಟ್ಯಾಲಯ. 2005ರಲ್ಲಿ ಆರಂಭವಾದ ಸಹಚೇತನ ನಾಟ್ಯಾಲಯವು ಇಂದಿಗೆ ನೂರಾರು ವಿದ್ಯಾರ್ಥಿಗಳನ್ನು ಹೊಂದಿ ಹೆಮ್ಮೆಯ ಸಂಸ್ಥೆಯಾಗಿ ಮೂಡಿದೆ. ಹಲವಾರು ಪ್ರಮುಖ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ದೇಶದ ಹಲವು ಕಡೆ ತಮ್ಮ ಪ್ರದರ್ಶನವನ್ನು ಯಶಸ್ವಿಯಾಗಿ ನೀಡಿದೆ.
ಸಹಚೇತನ ನಾಟ್ಯಾಲಯವು ಸಾಂಪ್ರದಾಯಿಕ ನೃತ್ಯ ಶೈಲಿಗಳನ್ನು ಕಾಪಾಡಿಕೊಂಡು ಬರುವುದರ ಜೊತೆಗೆ ಅದರ ಉನ್ನತಿ ಮತ್ತು ಏಳಿಗೆಗಾಗಿ ಶ್ರಮಿಸುವುದು ಹಾಗೂ ಶಾಸ್ತ್ರೀಯ ಸಂಪ್ರದಾಯಗಳನ್ನು ಉಳಿಸಿಕೊಳ್ಳುವುದು ಅಲ್ಲದೆ ಪ್ರಾದೇಶಿಕ ನೃತ್ಯ ಶೈಲಿಯಲ್ಲೂ ಪರಿಣತಿ ಪಡೆದು, ಪಾಂಡಿತ್ಯ ಹೆಚ್ಚಿಸಿ ಈ ಕಲೆಯನ್ನು ಪ್ರಚಾರ ಮಾಡುವುದೇ ಅಲ್ಲದೆ ವಿಶೇಷವಾಗಿ ಗ್ರಾಮೀಣ ಹಾಗೂ ಹಿಂದುಳಿದ ಮಕ್ಕಳಲ್ಲಿಯೂ ಸಹ ನೃತ್ಯ ಕಲೆಯನ್ನು ಬೆಳೆಸುವ ಘನ ಉದ್ದೇಶದಿಂದ ಅದರಂತೆ ಕಾರ್ಯಗಳನ್ನು ಮಾಡುತ್ತಲೇ ಮುನ್ನಡೆಯುತ್ತಾ ಬಂದಿದೆ. ಇವುಗಳೇ ಅಲ್ಲದೆ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯಾಧಾರಿತ ನೃತ್ಯವಾದ “ಪಠ್ಯದರ್ಶಿನಿ “, ಹಿಂದುಳಿದ ಬಡಾವಣೆಯ ಮಕ್ಕಳಿಗೆ “ಭಾರತೀಯಮ್ “, ಅಲ್ಲದೆ ದೇಶದ ವಿವಿಧತೆಗಳಲ್ಲಿ ಪ್ರಸಿದ್ಧವಾದ ವಿಶೇಷ ನೃತ್ಯಗಳನ್ನು ಕಲಾ ಪ್ರಕಾರಗಳನ್ನು ಪರಿಚಯಿಸುವ ” ನಾಟ್ಯಾರಾಧನಾ ” ಎಂಬ ಮೂರು ದಿನಗಳ ರಾಷ್ಟ್ರೀಯ ನೃತ್ಯ ಮಹೋತ್ಸವ ಮತ್ತು ಸಮಾಜಮುಖಿಯಾಗಿ ಸೇವೆಗೈದ ಆಯ್ದ ವ್ಯಕ್ತಿಗಳಿಗೆ “ಅಜಿತಶ್ರೀ ಪುರಸ್ಕಾರ್ ” ನೀಡಿ ಪುರಸ್ಕರಿಸುವುದೇ ಅಲ್ಲದೆ ಸಾಹಿತ್ಯಿಕವಾಗಿ “ಕವಿ ಕಂಡ ಯುಗಾದಿ” ಎಂಬ ಯುಗಾದಿ ಕವನ ಸಂಕಲನ, ಈ ಕವನ ಸಂಕಲನವು ಸಾಹಿತ್ಯ ಲೋಕದ ಜೇಷ್ಠ, ಶ್ರೇಷ್ಠರಿಗಷ್ಟೇ ಅಲ್ಲದೆ ಸಾಮಾನ್ಯನು ಕವಿಯಾಗುವಂತೆ ಮಾಡಿ ತಮ್ಮ ಕವನಗಳನ್ನು ಪುಸ್ತಕಗಳಲ್ಲಿ ಪ್ರಕಟಿಸುವುದಕ್ಕೆ ಅವಕಾಶ ಮಾಡಿಕೊಡುವ ಮಹತ್ವದ ಕಾರ್ಯ ಮಾಡಿದೆ. ಈ ರೀತಿಯ ಹತ್ತು ಹಲವಾರು ಸಮಾಜಮುಖಿ ಚಿಂತನೆಗಳನ್ನ ಮೈಗೂಡಿಸಿಕೊಂಡು ಅನವರತವಾಗಿ ಕಳೆದ ಹದಿಮೂರು ವರ್ಷಗಳಿಂದಲೂ ಮಾಡುತ್ತಲೇ ಬಂದಿದ್ದಾರೆ.
ಸಹಚೇತನದ ಸಾರಥಿ ಆದ ನೃತ್ಯ ಗುರು ಸಹನಾ ಚೇತನ್ ಅವರು ನೃತ್ಯಕ್ಕೆ ಅನ್ವರ್ಥವಾಗುವಂತೆ ಸಹಚೇತನವೇ ಆಗಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಸ್ವತಃ ಶಾಸ್ತ್ರೀಯ ಭರತನಾಟ್ಯದ ನೃತ್ಯ ಕಲಾವಿದೆಯಾಗಿ, ನೃತ್ಯ ಸಂಯೋಜಕರಾಗಿ, ಕಲಾ ನಿರ್ದೇಶಕರಾಗಿ, ವಿಮರ್ಶಕಿಯಾಗಿ ಹೀಗೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ಸೇವೆಗೈಯುತ್ತಾ, ಸಮಾಜದ ಎಲ್ಲ ಹಂತದವರಿಗೂ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಿ ರಾಷ್ಟ್ರ ಕಟ್ಟುವ ಸಮಷ್ಟಿಯ ಚಿಂತನೆಗೆ ನೀರೆರೆದಿದ್ದಾರೆ. ರಾಷ್ಟ್ರೀಯ, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹೆಜ್ಜೆ ಹಾಕಿ ನೃತ್ಯ ಮಾಡುತ್ತಲೇ ತಮ್ಮ ಮಕ್ಕಳನ್ನೂ ಅದೇ ಎತ್ತರಕ್ಕೇರಿಸುವ ಪ್ರಯತ್ನದಲ್ಲಿನ ಮತ್ತೊಂದು ಹಂತಕ್ಕೆ ಕಾಲಿಡುತ್ತಿದ್ದಾರೆ. ಇವರಿಂದ ಪ್ರಶಿಕ್ಷಿತರಾದ ಹಲವಾರು ವಿದ್ಯಾರ್ಥಿಗಳು ನೃತ್ಯ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದನ್ನು ಕಂಡಾಗ, ಅವರೇರಿದ ಉನ್ನತ ಸ್ಥಾನ ನೋಡಿದಾಗಲೇ ಗುರು ಶಿಷ್ಯರ ಹಿರಿಮೆಯ ಮಹತ್ವ ತಿಳಿಯುತ್ತದೆ.
ರಂಗ ಪ್ರವೇಶ:
ಭರತನಾಟ್ಯದ ಉದಯೋನ್ಮುಖ ಕಲಾವಿದರಿಗೆ ಈ ರಂಗ ಪ್ರವೇಶ ಎನ್ನುವುದು ಅತ್ಯಂತ ಮಹತ್ವದ ಕ್ಷಣ. ಅಲ್ಲಿಯವರೆಗೆ ಸಹ ನೃತ್ಯಾಭ್ಯಾಸಿಗಳೊಂದಿಗೆ ಸೇರಿ ರಂಗದಲ್ಲಿ ನಾಟ್ಯ ಪ್ರದರ್ಶನ ನೀಡಿದ್ದರು ತಮ್ಮ ನಾಟ್ಯ ಪ್ರತಿಭೆಯನ್ನು ಒಬ್ಬರೇ ರಂಗವನ್ನೇರಿ ಪ್ರೇಕ್ಷಕರೆದರು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವುದಾಗಿದೆ. ಶಿಸ್ತುಬದ್ಧವಾಗಿ ತಾವು ಕಲಿತದ್ದನ್ನು ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿ ಮುಂದಿನ ಹಂತಕ್ಕೆ ಇರುವ ಒಂದು ಮಹತ್ವದ ಘಟ್ಟವಿದು. ಆತ್ಮಾನುಭವದ ಅಭಿವ್ಯಕ್ತಿಯಾಗಿ, ಆನಂದದ ಪರಾಕಾಷ್ಟೆಯ ಅನುಭೂತಿಯಾದ ಆರ್ಥಿಕತೆಯ ಭಾಗವಾಗಿ ಹೊರಹೊಮ್ಮುತ್ತಿರುವ ಈ ಸಮಯದಲ್ಲಿ ಇದು ಎಲ್ಲರ ಸ್ವತ್ತಾಗಬೇಕೆಂಬ ಸದುದ್ದೇಶದಿಂದ ” ಸಾಮೂಹಿಕ ರಂಗಪ್ರವೇಶ”ದ ಹೊಸ ಚಿಂತನೆಯೊಂದಿಗೆ ಸಹಚೇತನ ನಾಟ್ಯಾಲಯದ ಐದು ವಿದ್ಯಾರ್ಥಿಗಳು ” ನೃತ್ಯ ಕದಂಬಕಂ” ಎಂಬ ನವ್ಯ ಪರಿಕಲ್ಪನೆಗೆ ನಾಂದಿ ಹಾಡಲಿದ್ದಾರೆ. ಈ ದಿನಗಳಲ್ಲಿ ರಂಗಪ್ರವೇಶವನ್ನು ಒಬ್ಬ ವಿದ್ಯಾರ್ಥಿ ಮಾಡಬೇಕಾದರೆ ಲಕ್ಷಾಂತರ ಹಣ ವ್ಯಯಿಸಿ ಆರ್ಥಿಕ ಹೊರೆ ಎನಿಸಿಕೊಳ್ಳಬೇಕಾಗುತ್ತದೆ. ಈ ಕಾರಣಕ್ಕೆ ಅನೇಕ ವಿದ್ಯಾರ್ಥಿಗಳು ಇದರಿಂದ ಹಿಂದೆ ಸರಿದು ಬಿಡುತ್ತಾರೆ. ಅದನ್ನು ತಪ್ಪಿಸಿ ಹೊಸತನಕ್ಕೆ ನಾಂದಿ ಹಾಡಲು ಹೊರಟಿರುವುದು ಈ ರಂಗ ಪ್ರವೇಶ. ಸುಮಾರು 12-13 ವರ್ಷಗಳಿಂದ ನಿರಂತರವಾಗಿ ಅಭ್ಯಾಸ ಮಾಡಿ, ಅನೇಕ ಉತ್ತಮ ವೇದಿಕೆಗಳಲ್ಲಿ ನೃತ್ಯಮಾಡಿ ಸೈ ಎನಿಸಿಕೊಂಡ ನಾಟ್ಯಾಲಯದ ವಿದ್ಯಾರ್ಥಿಗಳಾದ ಕು. ಸಿಂಧುಶ್ರೀ ಅಡಿಗ, ಕು. ಕಾಮಾಕ್ಷಿ ಆರ್. ಪ್ರಭು, ಕು. ಸೇಜಲ್ ಡಿ. ವಿ. , ಕು. ಶರಣ್ಯ ಎ. ಸಿ. ಮತ್ತು ರಕ್ಷಿತ ಆರ್. ಇವರುಗಳು ರಂಗಪ್ರವೇಶದ ಹೊಸ್ತಿಲಲ್ಲಿ ಇರುವವರು.
ಸದಾ ರಾಷ್ಟ್ರ ಚಿಂತನೆ ಸಾಮಾಜಿಕ ಕಳಕಳಿಯನ್ನು ತಮ್ಮ ಧ್ಯೇಯೋದ್ಧೇಶವೆಂಬಂತೆ ಮೈಗೂಡಿಸಿಕೊಂಡು ಬಂದಿರುವಂತಹ ಸಹಚೇತನ ನಾಟ್ಯಾಲಯವು ಉಚಿತ ಸಾಮೂಹಿಕ ರಂಗ ಪ್ರವೇಶವೆಂಬ ಹೊಸ ಪರಿಕಲ್ಪನೆಗೆ ಮುನ್ನುಡಿ ಬರೆದಿದ್ದಾರೆ. ಈ ಹೊಸತನ ಹೊಂದಿರುವ ಕಾರ್ಯಕ್ರಮ ಇದೇ ಜೂನ್ 23ರ ಭಾನುವಾರ ಸಂಜೆ 5:30ಕ್ಕೆ ಶಿವಮೊಗ್ಗ ನಗರದ ಕುವೆಂಪುರಂಗಮಂದಿರದಲ್ಲಿ Sahana Chethana Natyalaya Shivamogga ನಡೆಯಲಿದೆ. ಕಲಾಸಕ್ತರೆಲ್ಲರೂ ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆ ಮಕ್ಕಳಿಗೆ ಪ್ರೋತ್ಸಾಹಿಸಿ ಶುಭ ಹಾರೈಸುವುದರ ಜೊತೆಗೆ ನವ ಚಿಂತನೆಗೆ ಸಾಕ್ಷಿಯಾಗೋಣ.

  • ಡಾ. ಮೈತ್ರೇಯಿಆದಿತ್ಯಪ್ರಸಾದ್
    ಸಂಸ್ಕೃತ ಉಪನ್ಯಾಸಕರು ಪೇಸ್ ಪಿ. ಯು ಕಾಲೇಜು, ಶಿವಮೊಗ್ಗ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...