World Environment Day ಸಮಾಜದ ನಾಗರೀಕರು ಪರಿಸರ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಸುತ್ತಮುತ್ತಲು ಪರಿಸರಕ್ಕೆ ಪೂರಕವಾಗಿರುವ ಸಸಿಗಳನ್ನು ಬೆಳೆಸುವ ಮೂಲಕ ಪ್ರಕೃತಿ ರಕ್ಷಣೆಗೆ ಮುಂದಾಗದಿದ್ದಲ್ಲಿ ಭೂಮಿಯು ಮುಂದಿನ ದಿನಗಳಲ್ಲಿ ಅನೇಕ ದುರಂತಗಳನ್ನು ಎದುರಿಸುವ ಸಂಭವವಿದೆ ಎಂದು ಗೌ|| ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಶ್ರೀಮತಿ ಶುಭಗೌಡರ್ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
World Environment Day ಮುಂದಿನ ಜನಾಂಗದ ಶ್ರೇಯೋಭಿವೃದ್ದಿಗೆ ಪರಿಸರನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ, ಆ ನಿಟ್ಟಿನಲ್ಲಿ ಸಮಾಜ ನಾಗರೀಕರು ತಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಹೆಮ್ಮರವಾಗಿ ಬೆಳೆಸಿದರೆ ಶುದ್ಧ ಗಾಳಿ ಹಾಗೂ ನೆರಳಿನ ಆಸರೆ ಸಿಕ್ಕಂತಾಗುತ್ತದೆ ಎಂದ ಅವರು ಪ್ರತಿಯೊಬ್ಬರು ಇಂದಿನಿಂದಲೇ ಈ ನಿರ್ಧಾರ ವನ್ನು ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.
1974ರಲ್ಲಿ ವಿಶ್ವ ಪರಿಸರ ದಿನಾಚರಣೆ ಆರಂಭವಾಗಿ ಇಂದಿನವರೆಗೂ ಆಚರಿಸಲಾಗುತ್ತಿದೆ. ಪರಿಸರ ಆಚರಣೆ ಯ ಮೂಲ ಉದ್ದೇಶವೆಂದರೆ ಮಾಲಿನ್ಯ ತಡೆಗಟ್ಟಿ ಸಮಾಜದಲ್ಲಿ ಸ್ವಚ್ಚಂಧ ಪರಿಸರವನ್ನು ಉಳಿಸುವುದು. ಇದರೊಂದಿಗೆ ಅರಣ್ಯದಲ್ಲಿ ಒಂದು ಮರ ತೆರವುಗೊಳಿಸಿದರೆ ನೂರು ಸಸಿಗಳನ್ನು ನಡೆಯುವ ಕಾಯಕಕ್ಕೆ ಇಲಾಖೆ ಮುಂದಾದರೆ ಪ್ರಕೃತಿ ಉಳಿಯಲು ಸಾಧ್ಯ ಎಂದರು.
ಪ್ರಸ್ತುತ ದಿನಗಳಲ್ಲಿ ಪ್ರಕೃತಿ ರಕ್ಷಣೆಗೆ ಕಾಳಜಿ ವಹಿಸದಿದ್ದಲ್ಲಿ ಚಂಡಮಾರುತ, ಪ್ರವಾಹ, ಸೂಕ್ತ ಸಮಯಕ್ಕೆ ಮಳೆ ಬಾರದಿರುವುದು, ಅತಿವೃಷ್ಟಿ, ಅನಾವೃಷ್ಟಿಯಂತಹ ಹಲವಾರು ಸಮಸ್ಯೆಗಳನ್ನು ಮಾನವ ಸಮೂಹ ಎದುರಿಸಲಿದೆ. ಇದನ್ನರಿತು ಮಾನವ ಅತಿಹೆಚ್ಚು ಸಂಖ್ಯೆಯಲ್ಲಿ ಸಸಿಗಳ ಬೆಳೆಸುವುದಕ್ಕೆ ಶ್ರಮವಹಿಸಿದರೆ ಪ್ರಕೃತಿ ವಿಕೋಪದಿಂದ ಅನಾಹುತಗಳಿಂದ ಪಾರಾಗಬಹುದು ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಈ.ಕ್ರಾಂತಿ ಮಾತನಾಡಿ ಪ್ರಪಂಚದ ಹಲವಾರು ದೇಶಗಳಲ್ಲಿ ಪರಿಸರ ರಕ್ಷಣೆ ಬಗ್ಗೆ ಅನೇಕ ಕಾನೂನುಗಳಿದ್ದು ಅದೇ ರೀತಿ ಭಾರತದಲ್ಲೂ ಸಹ ಕಾನೂನು ರೂಪಿಸಿದ್ದು ಆ ಕಾನೂನನ್ನು ಪ್ರತಿಯೊಬ್ಬರು ನಿಸ್ವಾರ್ಥದಿಂದ ಪಾಲಿಸಿದರೆ ಯಾವುದೇ ರೀತಿಯ ಪ್ರಕೃತಿ ವಿಕೋಪದಂತಹ ಅವಘಡಗಳು ತಡೆಗಟ್ಟಲು ಸಾಧ್ಯ ಎಂದರು.
ಅನಾದಿಕಾಲದಿಂದ ನಮ್ಮ ಪೂರ್ವಜರು, ಹಿರಿಯರು ಪ್ರಕೃತಿ ರಕ್ಷಣೆ ಹೆಚ್ಚು ಒತ್ತು ನೀಡಿದ್ದರು. ಆದರೆ ಇಂದಿನ ಜನಸಂಖ್ಯೆ ವಿಪರೀತದಿಂದಾಗಿ ಪರಿಸರ ಹಾನಿಯಾಗುತ್ತಿದೆ. ಆ ನಿಟ್ಟಿನಲ್ಲಿ ಪ್ರಕೃತಿ ಸಂರಕ್ಷಣೆ ಬಗ್ಗೆ ಮುತುವರ್ಜಿ ವಹಿಸುವವರು ಪರಿಸರ ನಾಶ ಮಾಡುವ ಚಟುವಟಿಕೆಯಿಂದ ದೂರವಿದ್ದು ಸಸಿಗಳನ್ನು ಬೆಳೆಸುವ ರೀತಿಯಲ್ಲಿ ಪೂರಕವಾಗಿ ಹೆಚ್ಚು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರಾಗೃಹ ಅಧೀಕ್ಷಕ ಶ್ರೀಶೈಲಾ ಎಸ್.ಮೇಟಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾರಾಗೃಹ ಆವರಣ ಹಾಗೂ ಹೊರಾಂಗಣದಲ್ಲಿ ಅರಣ್ಯ ಇಲಾಖೆ ಆಶ್ರಯದಲ್ಲಿ ವಿವಿಧ ತಳಿಗಳ ಸಸಿಗಳನ್ನು ನೆಟ್ಟು ಪರಿಸರಕ್ಕೆ ಪೂರಕವಾಗಿ ಕೆಲಸ ಮಾಡಲಾಗುತ್ತಿದೆ. ಇನ್ನೂ ಮುಂದಿನ ಇವು ಗಳನ್ನು ಪೋಷಿಸುವ ಜವಾಬ್ದಾರಿಯನ್ನು ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಶ್ರೀಮತಿ ಬಿ.ಪುಷ್ಪಾಂಜಲಿ, ಹೆಚ್ಚುವರಿ ನ್ಯಾಯಾಧೀಶೆ ಬಿ.ಸಿ.ಭಾನುಮತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್.ಸೋಮ, ಜೈಲರ್ ಎಂ.ಕೆ.ನೆಲಧರಿ, ಸಹಾಯಕ ಜೈಲರ್‌ಗಳಾದ ವನಸಂಡೆ, ಬೊಂಗಾಳೆ, ನ್ಯಾಯಾಧೀಶರುಗಳಾದ ಸಿ.ವೀರಭದ್ರಯ್ಯ, ಜೆ.ಕೃಷ್ಣ, ಎಸ್.ಮಂಜು, ಜಿ.ಹರೀಶ್, ಎಸ್.ಆರ್.ನಂದಿನಿ ಮತ್ತಿತರರು ಉಪಸ್ಥಿತರಿದ್ದರು.