World Bicycle Day ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್.ಸಿ.ಡಿ ಘಟಕ ಮತ್ತು ನ್ಯಾಷನಲ್ ಮೆಡಿಕೋಸ್ ಆರ್ಗನೈಜೇಶನ್, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಕಾರ್ಯಕ್ರಮ ಅನುಷ್ಠನಾಧಿಕಾರಿ ಡಾ. ಶಮಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಿದ್ಧನ ಗೌಡ ಪಾಟೀಲ್, ಕಿರಣ್, ಅರುಣ್, ಭದ್ರಾವತಿಯ ಹಿರಿಯ ಪತ್ರಕರ್ತ ರವೀಂದ್ರ, ಪ್ರೆಸ್ ಟ್ರಸ್ಟ್‍ನ ಅಧ್ಯಕ್ಷ ಎಂ.ಮಂಜುನಾಥ್ ಇತರರು ಉಪಸ್ಥತರಿದ್ದರು.
ಸೈಕಲ್ ಜಾಥಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಹೊರಟು, ಕರ್ನಾಟಕ ಸಂಘ, ಅಮೀರ್ ಅಹಮದ್ ವೃತ್ತ, ಬಸ್ಟ್ಯಾಂಡ್, ಸರ್ಕೀಟ್ ಹೌಸ್ ವೃತ್ತ, ಕುವೆಂಪು ರಸ್ತೆ ಮೂಲಕ ಐ.ಎಂ.ಎ ಹಾಲ್ ತಲುಪಿತು.
ಬೈಸಿಕಲ್ ಉಪಯೋಗ & ಅಸಾಂಕ್ರಾಮಿಕ ರೋಗ ನಿರ್ವಹಣೆ: ಎರಡು ಶತಮಾನಗಳಿಂದ ಬಳಕೆಯಲ್ಲಿರುವ ಬೈಸಿಕಲ್ ಸರಳ ಕೈಗೆಟುಕುವ, ವಿಶ್ವಾಸಾರ್ಹ, ಸ್ವಚ್ಛ ಮತ್ತು ಪರಿಸರಕ್ಕೆ ಸೂಕ್ತವಾದ ಸುಸ್ಥಿರ ಸಾರಿಗೆ ಸಾಧನವಾಗಿದೆ, ಬೈಸಿಕಲ್ ಶುದ್ಧ ಗಾಳಿ ಮತ್ತು ಕಡಿಮೆ ದಟ್ಟಣೆಗೆ ಅವಕಾಶ ಮಾಡಿಕೊಡುವುದರಿಂದ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಇತರ ಸಾಮಾಜಿಕ ಸೇವೆಗಳನ್ನು ಹೆಚ್ಚು ದುರ್ಬಲ ವರ್ಗದವರಿಗೆ ಲಭಿಸುವಂತೆ ಮಾಡುತ್ತದೆ.
World Bicycle Day ಬೈಸಿಕಲ್ ಪ್ರಯೋಜನಗಳನ್ನು ಗುರುತಿಸಿ ಪ್ರೋತ್ಸಾಹಿಸಲು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 3 ನ್ನು ವಿಶ್ವ ಬೈಸಿಕಲ್ ದಿನವೆಂದು ಘೊಷಿಸಿದೆ. ಆರೋಗ್ಯಕ್ಕಾಗಿ ಸೈಕಲ್ ಎಂಬುದು ಈ ವರ್ಷದ ಘೋಷ ವಾಕ್ಯವಾಗಿದೆ.
ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಕಡಿಮೆಯಾಗಿದ್ದು, ಅಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಂಡುಬರುತ್ತವೆ. ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳು, ಹೃದಯ ಸ್ಥಂಭನ, ಪಾಶ್ರ್ವವಾಯು, ಮಧುಮೇಹ ಮತ್ತು ಕ್ಯಾನ್ಸರ್ ಪ್ರಮುಖ ಅಸಾಂಕ್ರಮಿಕ ರೋಗಗಳಾಗಿವೆ.
ವಿಶ್ವ ಆರೋಗ್ಯ ಸಂಸ್ಥೆಯ 2016 ರ ಅಂಕಿ ಅಂಶಗಳ ಪ್ರಕಾರ ಈ ರೋಗಗಳಿಂದ ವಿಶ್ವದಲ್ಲಿ ಪ್ರತಿವರ್ಷ 4 ಕೋಟಿ 10 ಲಕ್ಷ ಜನ ಅಂದರೆ ಪ್ರತಿ ಸೆಕೆಂಡಿಗೆ 75 ಜನರು ಮತ್ತು ಭಾರತದಲ್ಲಿ 60 ಲಕ್ಷ ಜನ ಅಂದರೆ ಪ್ರತಿ ಸೆಕೆಂಡಿಗೆ 12 ಜನ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ಒಟ್ಟು ಮರಣಗಳಲ್ಲಿ ಶೇ 60% ಕ್ಕೂ ಹೆಚ್ಚು ಮರಣಗಳು ಅಸಾಂಕ್ರಾಮಿಕ ರೋಗಗಳಿಂದಲೇ ಅಂಭವಿಸುತ್ತಿವೆ.
ತಂಬಾಕು ವ್ಯಸನ, ವ್ಯಾಯಾಮ ಅಥವಾ ದೈಹಿಕ ಶ್ರಮವಿಲ್ಲದಿರುವುದು, ಅತಿಯಾದ ಮಧ್ಯಪಾನ ಮತ್ತು ಅನಾರೋಗ್ಯಕರ ಆಹಾರ ಅಭಾಸಗಳು ಅಸಾಂಕ್ರಾಮಿಕ ರೋಗಗಳಿಗೆ ಮುಖ್ಯ ಕಾರಣಗಳು.
ತಂಬಾಕು ಸೇವನೆಯ ದುಷ್ಪರಿಣಾಮದಿಂದ ಉಂಟಾಗುವ ರೋಗಗಳಿಂದಲೇ ಭಾರತದಲ್ಲಿ ಪ್ರತಿ ವರ್ಷ 13.5 ಲಕ್ಷ ಜನ ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ ಕಂಡುಬರುವ ಶೇ.40 ರಷ್ಟು ಕ್ಯಾನ್ಸರ್‍ಗೆ ತಂಬಾಕು ನೇರ ಕಾರಣವಾಗಿದೆ. ತಂಬಾಕು ವ್ಯಸನ ತ್ಯಜಿಸಲು ಬಯಸುವವರಿಗೆ ಸಹಾಯ ಮಾಡಲು ಜಿಲ್ಲಾ ಮೆಗ್ಗಾನ್ ಭೋದನಾ ಆಸ್ಪತ್ರೆಯ ಕೊಠಡಿ ಸಂಖ್ಯೆ 17 ರಲ್ಲಿ ತಂಬಾಕು ವ್ಯಸನ ಮುಕ್ತಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಪ್ರತಿದಿನ ಕನಿಷ್ಠ 30 ನಿಮಿಷಗಳ ದೈಹಿಕ ವ್ಯಾಯಾಮ ಉತ್ತಮ ಆರೋಗ್ಯಕ್ಕೆ ಅತ್ಯಾವಶ್ಯಕ, ಮಧ್ಯಮ ತೀವ್ರತೆಯ ನಿಯಮಿತ ದೈಹಿಕ ಚಟುವಟಿಕೆಗಳಾದ ಸೈಕ್ಲಿಂಗ್, ಯೋಗ, ಈಜು ಅಥವಾ ಇತರೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಗಮನಾರ್ಹ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ 30 ವರ್ಷ ಮೇಲ್ಪಟ್ಟವರಿಗೆ ಅಸಾಂಕ್ರಾಮಿಕ ರೋಗಗಳ ಸ್ಕ್ರೀನಿಂಗ್ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.