Chamber Of Commerce Shivamogga ವೃತ್ತಿ ಕ್ಷೇತ್ರಗಳಲ್ಲಿ ಪರಿಪೂರ್ಣತೆ ಸಾಧಿಸಲು ಕೌಶಲ್ಯ ತರಬೇತಿಗಳು ಅತ್ಯಂತ ಅವಶ್ಯಕ. ಕೌಶಲ್ಯ ಕಲಿಕೆ ಹಾಗೂ ವೃತ್ತಿ ಸೇವೆಯ ತರಬೇತಿಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ನಗರದ ರೋಟರಿ ಮಿಡ್ ಟೌನ್ ಸಭಾಂಗಣದಲ್ಲಿ ಕ್ಯಾಲೈಟೆಕ್ಸ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಕೌಶಲ್ಯ ಅಭಿವೃದ್ಧಿ ಹಾಗೂ ವೃತ್ತಿ ಸೇವಾ ಅವಕಾಶಗಳ ಬಗ್ಗೆ ತರಬೇತಿ ಹಾಗೂ ಮಾರ್ಗದರ್ಶನದ ಪ್ರವೇಶ ಪರೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.
Chamber Of Commerce Shivamogga ತಂತ್ರಜ್ಞಾನ ಮುಂದುವರೆದಂತೆ ಉದ್ಯೋಗ ಕ್ಷೇತ್ರದಲ್ಲೂ ವಿಫುಲ ಅವಕಾಶಗಳಿದ್ದು, ಆಯಾ ವೃತ್ತಿ ಕ್ಷೇತ್ರಗಳಿಗೆ ಪೂರಕವಾದ ಕೌಶಲ್ಯಗಳು ಮುಖ್ಯ ಆಗುತ್ತವೆ. ಪ್ರತಿಯೊಬ್ಬರು ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಪರಿಣತಿ ಹೊಂದಲು ತರಬೇತಿ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಉನ್ನತ ಹಂತಕ್ಕೆ ತಲುಪಬೇಕು ಎಂದು ತಿಳಿಸಿದರು.
ರೋಟರಿ ಸಂಸ್ಥೆಯು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿದ್ದು, ಆರ್ಥಿಕವಾಗಿ ಹಿಂದುಳಿದ, ಪಿಯು ನಂತರ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದೇ ಇರುವ ಉದ್ಯೋಗ ಆಕಾಂಕ್ಷಿಗಳಿಗೆ ವಿಶೇಷವಾಗಿ ಕೌಶಲ್ಯ ತರಬೇತಿ ನೀಡುತ್ತಿರುವುದು ಅಭಿನಂದನೀಯ ಕೆಲಸ. ಇದರಿಂದ ಅನೇಕರು ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯಗಳ ಜತೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ತರ ಸೇವೆ ಸಲ್ಲಿಸುತ್ತಿದೆ. ಅವಕಾಶ ವಂಚಿತರಿಗೆ ಕೌಶಲ್ಯ ತರಬೇತಿ ನೀಡುವ ಜತೆಯಲ್ಲಿ ಉದ್ಯೋಗ ದೊರಕುವಂತೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಕೌಶಲ್ಯಕ್ಕೆ ಶಿಬಿರಾರ್ಥಿಗಳು ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಮಿಡ್‌ಟೌನ್ ಅಧ್ಯಕ್ಷೆ ವೀಣಾ ಸುರೇಶ್ ಮಾತನಾಡಿ, ಕೌಶಲ್ಯ ಅಭಿವೃದ್ಧಿ ಕಾರ್ಯ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಸಂವಹನ ಕೌಶಲ್ಯ, ಕಂಪ್ಯೂಟರ್ ವಿಜ್ಷಾನದ ಮೂಲ ಆಶಯ, ಸಾಪ್ಟವೇರ್‌ಗಳ ಪರಿಚಯ, ಕಾರ್ಯಕ್ರಮ ನಿರೂಪಣೆ, ಪರೀಕ್ಷೆ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಡಾ. ಧರಣಿ ದೇವಂಗಿ, ಖಜಾಂಚಿ ಸುನೀತಾ, ವೃತ್ತಿಸೇವೆ ಚೇರ‍್ಮನ್ ಸುಜಾತಾ ಮತ್ತಿತರರು ಉಪಸ್ಥಿತರಿದ್ದರು.