Saturday, November 23, 2024
Saturday, November 23, 2024

Shri Guru Shivayogi Bakkeswara Mahaswami ಕಣ್ಮನ ಸೆಳೆಯುವ ಶತಮಾನ‌ ಕಂಡಿರುವ ದಾವಣಗೆರೆ ಶ್ರೀಬಕ್ಕೇಶ್ವರಸ್ವಾಮಿ ಕಲಾತ್ಮಕ ತೇರುಗಡ್ಡೆ

Date:

Shri Guru Shivayogi Bakkeswara Mahaswami ಶತಮಾನದ ಸಂಭ್ರಮದಲ್ಲಿ ಶ್ರೀ ಗುರು ಶಿವಯೋಗಿ ಬಕ್ಕೇ ಶ್ವರ ಮಹಾ ರಥೋತ್ಸವ” -ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ಮಹಾ ರಥೋತ್ಸವಕ್ಕೆ ನೂರು ವರ್ಷವಾದರೆ ರಥಕ್ಕೆ ನೂರಾರು ವರ್ಷ- ನೂರು ವರ್ಷಗಳ ಅವಧಿ ಎಂದರೆ ಇದಕ್ಕೆ ಶತಕ, ಶತಮಾನ ಎಂದೆಲ್ಲ ವಿಶೇಷವಾಗಿ ಬಣ್ಣಿಸಲಾಗುತ್ತದೆ. ಚೌಕೀ ಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಗಳ ಮಹಾ ರಥೋತ್ಸವಕ್ಕೆ ಈ ಬಾರಿ ಒಂದು ನೂರು ವರ್ಷ ಆದರೆ ಈ ರಥಕ್ಕೆ ನೂರಾರು ವರ್ಷಗಳ ಇತಿಹಾಸ ಇರುವುದು ಒಂದು ಸ್ವಾರಸ್ಯ. -ಬಕ್ಕೇಶ್ವರರ ಸಂಕ್ಷಿಪ್ತ ಇತಿಹಾಸ- ದೇವತೆಗಳ ಅವತಾರಗಳು ವಿಶ್ವ ವ್ಯಾಪ್ತಿಯಲ್ಲಿ ಆಗುತ್ತದೆಯಾದರೂ ದೈವಾಂಶ ಸಂಭೂತರ

ಅವತಾರಗಳು ಪ್ರಾದೇಶಿಕವಾಗಿ ಅಲ್ಲಲ್ಲಿ ಆದ ನಿದರ್ಶನಗಳು ಇವೆ. ಶ್ರೀ ಬಕ್ಕೇಶ್ವರರ ಜನ್ಮವು ದಾವಣಗೆರೆ ಸಮೀಪದ ಗುಮ್ಮನೂರಿನ ಹಿರೇಮಠದ ಬಸವಲಿಂಗಯ್ಯ ಪಾರ್ವತಮ್ಮನವರ ಗರ್ಭಾಂಬುದಿಯಲ್ಲಿ ಪಂಚಗಣಾಧೀಶರ ಕೃಪೆ ಹಾಗೂ ಹೆಬ್ಬಾಳದ ಶ್ರೀ ರುದ್ರೇಶ್ವರರ ಆಶೀರ್ವಾದದಿಂದ, ಉಳವಿಯ ಶ್ರೀ ರೇಚಿ ತಂದೆಯವರ ಕಾರುಣ್ಯದೊಂದಿಗೆ 1770ರಲ್ಲಿ ಆಗುವಾಗ ಮಗುವಿನ ಬಲಗಿವಿಯ ಮೇಲೆ ‘ಬೊಕ್ಕೆ’ಯೊಂದು ಅಂದರೆ ‘ಬಕ್ಕೆ’ಯೊಂದು ಇದ್ದದ್ದರಿಂದ ‘ಬಕ್ಕೇಶ’ ಎಂದು ನಾಮಕರಣ ಮಾಡಲಾಯಿತು. ಗುಮ್ಮನೂರಿನಲ್ಲಿ ಶ್ರೀ ಬಕ್ಕೇಶ್ವರರ ಗದ್ದುಗೆ ರೂಪದ ಸ್ಮಾರಕವಿದ್ದು ಅವರ ಪೂರ್ವಾ ಶ್ರಮದ ವಂಶಸ್ಥರು ಅಲ್ಲಿದ್ದಾರೆ. ಆ ವಂಶದ ರುದ್ರಯ್ಯ ರುದ್ರಮ್ಮನವರ ಪುತ್ರ ರುದ್ರೇಶ್ ರವರು ನಿವೃತ್ತ ಶಿಕ್ಷಕರಾಗಿದ್ದು ದೀಕ್ಷಿತ್ ರಸ್ತೆಯ ನಮ್ಮ ಮನೆಯ ಎದುರಿನಲ್ಲೇ ವಾಸವಾಗಿದ್ದಾರೆ. ಗುಮ್ಮನೂರಿನ ಆ ಮನೆಯಲ್ಲಿ ಒಂದಷ್ಟು ಗ್ರಂಥಗಳ ಕಟ್ಟು ಇತ್ತೆಂದೂ ಬಹಳ ಹಿಂದೆಯೇ ಕಣವಿ ಬಸ್ಸಜ್ಜರೆಂಬುವವರು ಅಧ್ಯಯನಕ್ಕಾಗಿ ಅದನ್ನು ತೆಗೆದುಕೊಂಡು ಹೋದರೆಂದು ಹೇಳುವರು. ಬಾಲಕ ಬಕ್ಕೇಶಗೆ ಸುಜ್ಞಾನಿ ಜಂಗಮ ಶಿವಾಚಾರ್ಯರಿಂದ ಶಿವ ದೀಕ್ಷೆ ದೊರೆತು ಮುಂದೆ ಜಂಗಮಾವಸ್ಥೆಯಲ್ಲಿ ದೇಶ ಸಂಚಾರ ಹೊರಟು ಕೊಟ್ಟೂರು, ಸೊಂಡೂರು, ಉಜ್ಜನಿ, ಹೇಮಕೂಟ, ಗೋಕರ್ಣ, ಕಂಚಿ, ಕಾಳಹಸ್ತಿ, ಶ್ರೀಶೈಲ,ವಾರಣಾಸಿ( ಕಾಶಿ) ಮುಂತಾದ ಕ್ಷೇತ್ರಗಳ ಸಂದರ್ಶನ ಮಾಡಿ ಹರಿಹರ ಸಮೀಪದ ಐರಣಿಗೆ ಬಂದು ಅಲ್ಲಿಂದ ತುಂಗಭದ್ರಾ ತೀರದ ‘ಶಂಕರನಾರಾಯಣ’ ಕ್ಷೇತ್ರ ಅಂದರೆ ಈಗಿನ ಪರಿಸರಕ್ಕೆ ಚಿತ್ತೈಸಿ ಅಲ್ಲಿನ ಸದ್ಭಕ್ತ ಸತ್ಯಪ್ಪ (ಸತ್ಯನಾರಾಯಣ) ಶೆಟ್ಟರಲ್ಲಿ ಕೆಲ ಕಾಲ ಇದ್ದು ಆಶೀರ್ವದಿಸಿ ನಂತರ ದಾವಣಗೆರೆಗೆ ಬಂದು ಹಳೆ ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಮೀಪದಲ್ಲಿ ಮಠ ಮಾಡಿಕೊಂಡು ಭಕ್ತ ಜನರ, ಪುರಜನರ, ಪರಿಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಚಿತ್ರದುರ್ಗದ ಶ್ರೀಮನ್ ನಿರಂಜನ ಜಗದ್ಗುರು ರಾಚವಟ್ಟಿ ಮುರುಘರಾಜೇಂದ್ರ ಸ್ವಾಮಿಗಳವರ ಲಿಂಗಾಂಗ ಸಾಮರಸ್ಯ ಸುಜ್ಞಾನ ಹೊಂದಿ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ ಮೇಲೂ ಆಧ್ಯಾತ್ಮಿಕ ಪ್ರಭಾವ ಬೀರಿ 1855ನೇ ಇಸ್ವಿಯ ಚೈತ್ರ ಶುದ್ಧ ಪಂಚಮಿಯಂದು ತಮ್ಮ ಇಹಲೋಕದ ಕಾರ್ಯ ಮುಗಿಸಿದಾಗ ಅವರ ಇಚ್ಛೆಯಂತೆ ಚೌಕಿಗುಂಡಿ ಅಂದರೆ ಈಗಿನ ಚೌಕಿಪೇಟೆಯಲ್ಲಿ ಕ್ರಿಯಾ ಕಟ್ಟಳೆಯಂತೆ ಗದ್ದುಗೆ ಮಾಡಲಾಯಿತು. ಈ ಸ್ಥಳದಲ್ಲಿ ದೇವಸ್ಥಾನವನ್ನು ಮಾಗನಹಳ್ಳಿ ವಂಶಸ್ಥರು ಆಗಿನ ಅನೇಕ ಗಣ್ಯರ ಸಹಾಯದಿಂದ ನಿರ್ಮಿಸಿದರು. ಗದ್ದುಗೆಯಲ್ಲಿ ಅಂತರ್ಧಾನರಾಗಿ ಈಗಲೂ ಭಕ್ತರನ್ನು ಹರಸುತ್ತಿದ್ದಾರೆ. -ಮಹಾರಥೋತ್ಸವಕ್ಕೆ ವಿಶೇಷತೆ- ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಗಳವರ ಮಹಾರಥೋತ್ಸವವು ಪ್ರತಿ ವರ್ಷದ ಚೈತ್ರ ಶುದ್ಧ ಪಂಚಮಿಯಂದು ಪಾರಂಪರಿಕ ಭಕ್ತಿ ಶೃದ್ಧಾ ಸಂಭ್ರಮಗಳಿಂದ ನೆರವೇರುತ್ತಿದೆ.

Shri Guru Shivayogi Bakkeswara Mahaswami ಪ್ರಸ್ತುತ ಈ ಮಹಾರಥೋತ್ಸವಕ್ಕೆ ಒಂದು ನೂರು ವರ್ಷಗಳ ಸಂಭ್ರಮ. ರಥೋತ್ಸವಕ್ಕೆ ಒಂದು ನೂರು ವರ್ಷಗಳೇ ವಿನಹ ಈ ರಥವು ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಂಭವವಿದೆ. ಏಕೆಂದರೆ ಪೂರ್ವದಲ್ಲಿ ಈ ರಥವು ಹರಿಹರದ ಒಂದು ದೇವಿಯ ರಥವಾಗಿತ್ತು ಎಂದು ತಿಳಿದು ಬರುತ್ತದೆ. ಕಾರಣಾಂತರಗಳಿಂದ ಅದನ್ನು ಬಳಸದೆ ತುಂಗಭದ್ರಾ ನದಿಯ ಹಿನ್ನೀರಿನಲ್ಲಿ ಅಂದರೆ ನದಿ ಅಂಚಿನ ನೀರಿನಲ್ಲಿ ಮುಳುಗಿಸಿ ಇಡಲಾಗಿತ್ತೆಂದೂ, ಶತಮಾನಕ್ಕೂ ಹಿಂದೆ ಸುಮಾರು ಎರಡು ನೂರು ರೂಪಾಯಿಗಳ ‘ಭಕ್ತಿಧನ’ ಕೊಟ್ಟು ರಥವನ್ನು ದಾವಣಗೆರೆಗೆ ತಂದು ಶ್ರೀ ಬಕ್ಕೇಶ್ವರ ಸ್ವಾಮಿಯವರ ರಥವನ್ನಾಗಿ ಬಳಸಲಾಗುತ್ತಿದೆಯೆಂದೂ ಕೀರ್ತಿಶೇಷ ಮಾಗನಹಳ್ಳಿ ಗುರುಸಿದ್ದಪ್ಪನವರು ಹೇಳಿದ್ದು ನನಗೀಗಲೂ ನೆನಪಿದೆ. ಹೀಗಾಗಿಯೇ ಈ ರಥೋತ್ಸವಕ್ಕೆ ನೂರು ವರ್ಷಗಳಾದರೂ ರಥಕ್ಕೆ ನೂರಾರು ವರ್ಷಗಳ ಐತಿಹ್ಯವಿದೆ. ಗಾತ್ರದಲ್ಲಿ ಭಾರೀ ದೊಡ್ಡದಲ್ಲದಿದ್ದರೂ ಲಕ್ಷಣದಲ್ಲಿ ಈ ರಥವು ಅತ್ಯಂತ ಸುಂದರವಾಗಿದೆ. ಕಾರಣ ರಥದ ಪಾದ ಭಾಗವಾಗಿರುವ ತೇರು ಗಡ್ಡೆಯು ಸಾಂಪ್ರದಾಯಿಕ ರೂಪ ಲಕ್ಷಣಗಳಲ್ಲಿ ಪೂರ್ವ ಭಾಗಕ್ಕೆ ಶ್ರೀ ಮಹಾಗಣಪತಿ, ಪಶ್ಚಿಮಕ್ಕೆ ಪರಾಶಕ್ತಿರೂಪೀ ಶ್ರೀ ಲಕ್ಷ್ಮೀ, ಉತ್ತರಕ್ಕೆ ವೀಣಾಪಾಣಿ ಶ್ರೀ ಸರಸ್ವತೀ, ದಕ್ಷಿಣಕ್ಕೆ ಬಹುಶಃ ಶ್ರೀ ವೀರಭದ್ರ, ಈ ನಾಲ್ಕೂ ಮೇಲ್ಭಾಗಗಳಲ್ಲಿ ಸಪತ್ನೀಕರಾಗಿ ವಾಹನಾರೂಢರಾದ ಅಷ್ಟದಿಕ್ಪಾಲಕರು, ದಕ್ಷಿಣೋತ್ತರಗಳಲ್ಲಿ ಬೆಸೆದುಕೊಂಡಂತಿರುವ ಚತುಷ್ ಚಕ್ರಗಳು, ಪೂರ್ವೋತ್ತರಗಳಲ್ಲಿ ಗಜ ಮಂಡಿ ಸಾಲು,ಆಮ್ರತೋರಣ ಹಿಡಿದೆತ್ತಿರುವ ಬಾಹುಕಿ ಬೊಂಬೆಗಳ ಸೂಕ್ಷ್ಮಕೆತ್ತನೆಗಳು ಇದ್ದು ಪದೇ ಪದೇ ಹುರಿಮಂಜು ನಂತರದಲ್ಲಿ ಬಣ್ಣ ಹಚ್ಚುವುದರಿಂದಾಗಿ ಮುಚ್ಚಿ ಹೋಗಿದ್ದರೂ ಸಾಂಪ್ರದಾಯಿಕ ಮತ್ತು ಪಾರಂಪರಿಕ ಅಂದಮಾತ್ರ ರಥಗಡ್ಡೆಯಲ್ಲಿ ಅದ್ಭುತವಾಗಿದೆ. ರಥದ ಪಾದ ಭಾಗ ಅಂದರೆ ಕಟಿಭಾಗ, ಉದರಭಾಗ ನಾಲ್ಕು ದಿಕ್ಕುಗಳಿಗೆ ನಾಲ್ಕು ದ್ವಾರಗಳನ್ನು ಹೊಂದಿ ಹೃದಯ ಭಾಗವು ಆವರ್ತ ಮುಚ್ಚಲ್ಪಟ್ಟಿದ್ದು ಈ ಎರಡೂ ಹಂತಗಳು ಹಿತ್ತಾಳೆಯ ಅದ್ಭುತ ಉಬ್ಬು ಚಿತ್ರಗಳ ಫಲಕಗಳನ್ನು ಹೊಂದಿದ್ದು ರಥದ ಬಾಹುಭಾಗವು ಪಂಚವರ್ಣಾತ್ಮಕ ಧ್ವಜ ಸಹಸ್ರಗಳಿಂದ ತೂಗುತ್ತಿದ್ದರೆ ಶಿರೋಭಾಗವು ರಕ್ತವರ್ಣದ ಹಂಡೇವು, ಮೇಲೆ ಸುವರ್ಣ ವರ್ಣದ ‘ಕಳಶ’ ಮನೋಹರವಾಗಿದೆ. ನಾನಿಲ್ಲಿ ವಿವರಿಸಿರುವ ವಿಶೇಷತೆಗಳನ್ನೆಲ್ಲಾ ಕಣ್ತುಂಬಿಕೊಳ್ಳಬೇಕೆಂದರೆ ಮಹಾರಥೋತ್ಸವದ ದಿನ ಮಧ್ಯಾಹ್ನದೊಳಗೇ ಹೋಗಿ ನೋಡಬೇಕು, ನಂತರವಾದರೆ ಹೂವಿನ ಅಲಂಕಾರದಿಂದಾಗಿ ಮುಚ್ಚಿಹೋಗಿರುತ್ತದೆ,ಹಗಲು ಬೆಳಕೂ ಇರುವುದಿಲ್ಲ, ಜನಜಂಗುಳಿಯೂ ಅಪಾರವಾಗಿರುತ್ತದೆ. ಈ ಮಹಾ ರಥದ ತೇರು ಗಡ್ಡೆಯು ತುಸು ಜೀರ್ಣಾವಸ್ಥೆಯಲ್ಲಿ ಇರುವುದರಿಂದ ಹೊಸ ತೇರುಗಡ್ಡೆಯ ನಿರ್ಮಾಣ ಪ್ರಕ್ರಿಯೆ ಆರಂಭವಾಗಿದ್ದು ಬಹುಶಹ ಈ ನೂರಾರು ವರ್ಷದ ತೇರು ಗಡ್ಡೆಯನ್ನು ವೀಕ್ಷಿಸಲು ಈ ವರ್ಷದ ಮಹಾರಥೋತ್ಸವವೇ ಕೊನೆಯ ಅವಕಾಶವೆಂದು ಕಾಣುತ್ತದೆ. ಮುಂದಿನ ವರ್ಷ ಹೊಸ ತೇರುಗಡ್ಡೆ ಬರಬಹುದಾಗಿದೆ. ಸಂಪ್ರದಾಯದಂತೆ ಚೈತ್ರ ಶುದ್ಧ ಪಂಚಮಿಯಂದು ಈ ರಥೋತ್ಸವ ಜರುಗಬೇಕಾಗಿದ್ದರೂ ಈ ವರ್ಷ ಷಷ್ಟಿಯಂದು ನೆರವೇರುತ್ತಿದೆ, ಏಕೆಂದರೆ ಸೂರ್ಯನ ದಿನವಾದ ಆದಿತ್ಯವಾರದಂದು ಮಹಾ ರಥವನ್ನು ಪೂರ್ವ ದಿಕ್ಕಿಗೆ ಎಳೆಯುವಂತಿಲ್ಲವೆಂಬ ಪ್ರತೀತಿ ಕೆಲವೆಡೆ ಇದ್ದು ಭಾನುವಾರದ ಬದಲು ಇಂದು ಸೋಮವಾರ ಈ ಮಹಾ ರಥೋತ್ಸವ ಜರುಗಲಿದೆ. ಮಹಾರಥೋತ್ಸವದ ಮುನ್ನಾದಿನ ಶ್ರೀ ಸ್ವಾಮಿಯ ಗಜವಾಹನೋತ್ಸವವೂ, ಮಹಾರಥೋತ್ಸವದ ಮಾರನೆಯ ದಿನ ನಂದಿವಾಹನೋತ್ಸವವೂ ಇದ್ದು ಸಾಲಂಕೃತ ಗಜ ವಿಗ್ರಹ ವಿಗ್ರಹ ಮತ್ತು ಮನುಷ್ಯ ದೇಹ ನಂದಿ ಮುಖದ ನಂದಿ ವಿಗ್ರಹವು ಹಿತ್ತಾಳೆ ಹಾಗೂ ತಾಮ್ರಗಳಿಂದ ನಿರ್ಮಿಸಿದ್ದು ಅತ್ಯಂತ ಕಲಾತ್ಮಕವಾಗಿ ನೋಡಲೇಬೇಕೆನ್ನುವಂತಿದೆ.

 

ವಿಶೇಷ ಲೇಖನ: -ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ, ದಾವಣಗೆರೆ-

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...