Shivamogga Meggan Hospital ಮೊಟ್ಟ ಮೊದಲ ಬಾರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹುಟ್ಟಿನಿಂದಲೇ ಬರುವ ಕಿವುಡುತನಕ್ಕೆ ಅತ್ಯಾಧುನಿಕವಾದ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಇಂದಿನಿಂದ ಪ್ರಾರಂಭಿಸಲಾಗಿದೆ.
ಹುಟ್ಟಿನಿಂದಲೇ ಸಂಪೂರ್ಣ ಕಿವುಡಾದ ಮಕ್ಕಳಿಗೆ ಶ್ರವಣ ಸಾಧನಗಳು ಉಪಯೋಗಕ್ಕೆ ಬರುವುದಿಲ್ಲ. ಇಂತಹ ಮಕ್ಕಳಿಗೆ ವರದಾನವಾಗಿ ಬಂದಿರುವುದು ಈ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯಾಗಿದೆ. ಈ ಶಸ್ತ್ರಚಿಕಿತ್ಸೆ ದುಬಾರಿಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯಡಿ ಈ ಚಿಕಿತ್ಸೆಯನ್ನು ಸೇರಿಸಿದ್ದು ಇದನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುವುದು.
ಪ್ರತಿ ಸಾವಿರ ಜನನ ಪ್ರಮಾಣಕ್ಕೆ ಎರಡು ಮಕ್ಕಳು ಹುಟ್ಟುವಾಗಲೇ ಕಿವುಡು ಉಂಟಾಗಿರುತ್ತದೆ ಇದರಲ್ಲಿ ಒಂದು ಮಗುವಿನ ಕಿವುಡುತನ ಅಲ್ಪ ಪ್ರಮಾಣದಲ್ಲಿದ್ದು ಅದನ್ನು ವಿವಿಧ ಸುಲಭ ಚಿಕಿತ್ಸೆ, ಹಿಯರಿಂಗ್ ಏಡ್ ಅಥವಾ ಶ್ರವಣ ಸಾಧನಗಳನ್ನು ಬಳಸಿ ಪುನಶ್ಚೇತನಗೊಳಿಸಬಹುದು.
ಆದರೆ, ಹುಟ್ಟುವಾಗಲೇ ಸಂಪೂರ್ಣ ಕಿವುಡುತನ ಇರುವ ಮಕ್ಕಳಿಗೆ ಕಿವಿಯ ಒಳಗಡೆ ಇರುವ ಶ್ರವಣಕ್ಕೆ ಸಂಬಂಧಿಸಿದ ನರಗಳು ಕೆಲಸ ಮಾಡುವುದಿಲ್ಲ. ಆದ್ದರಿಂದ ಇವರಿಗೆ ಶ್ರವಣ ಸಾಧನ ಕೆಲಸ ಮಾಡುವುದಿಲ್ಲ.
ಕಳೆದ 50 ರಿಂದ 60 ವರ್ಷಗಳಿಂದ ಇದರ ಬಗ್ಗೆ ನಿರಂತರವಾಗಿ ಸಂಶೋಧನೆಗಳು ನಡೆದಿದ್ದರೂ, 15 ರಿಂದ 20 ವರ್ಷಗಳಿಂದೀಚಿಗೆ ಇದು ಚೆನ್ನಾಗಿ ಅಭಿವೃದ್ದಿಯಾಗಿದೆ. ಭಾರತದಲ್ಲಿ ಕಳೆದ 10 ವರ್ಷಗಳಿಂದ ಇದು ಜನಪ್ರಿಯವಾಗಿದೆ.
ಈ ಚಿಕಿತ್ಸೆ ಮುಖ್ಯ ಸಮಸ್ಯೆ ಎಂದರೆ ಇದಕ್ಕೆ ಸುಮಾರು ರೂ. 10 ರಿಂದ 12 ಲಕ್ಷ ಖರ್ಚಾಗುತ್ತದೆ. ಎಲ್ಲರಿಗೂ ಇದನ್ನು ಭರಿಸಲು ಸಾಧ್ಯವಾಗುವುದಿಲ್ಲ. ಈ ಹಿಂದೆ ಕೇಂದ್ರ ಸರ್ಕಾರ ಎಡಿಐಪಿ ಯೋಜನೆಯಡಿ ಇದರ ವೆಚ್ಚ ಭರಿಸುತ್ತಿದ್ದರೂ ಹೆಚ್ಚಿನ ಪ್ರಮಾಣದ ಅನುದಾನ ದೊರೆಯುತ್ತಿರಲಿಲ್ಲ. ರಾಷ್ಟ್ರೀಯ ಕಿವುಡುತನ ನಿರ್ಮೂಲನಾ ಮತ್ತು ನಿಯಂತ್ರಣ ಯೋಜನೆಯ ಕಾರಣದಿಂದ ನಮ್ಮ ಸಂಸ್ಥೆಯಲ್ಲಿ ಕಿವುಡುತನದ ಬಗ್ಗೆ ಸಾಕಷ್ಟು ಅರಿವು ಮೂಡಿದೆ. ಈ ಯೋಜನೆಯ ಕಾರಣದಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವಾಕ್ ಶ್ರವಣ ಕೇಂದ್ರ ಪ್ರಾರಂಭಿಸಲಾಗಿದೆ. ಮತ್ತು ಹುಟ್ಟುವ ಎಲ್ಲಾ ಮಕ್ಕಳಿಗೆ ಅತ್ಯಾಧುನಿಕ ತಂತ್ರಜ್ಞಾನದಿಂದ ಕಿವುಡುತನ ತಪಾಸಣೆ ಮಾಡಲಾಗುತ್ತಿದೆ.
ಈ ವರ್ಷ ರಾಜ್ಯದಲ್ಲಿ 500 ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಮಾಡುವ ಗುರಿಯನ್ನು ಹೊಂದಲಾಗಿದೆ.
ಈ ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ಮುಂಚಿನ ತಪಾಸಣೆ, ಕಾಕ್ಲಿಯರ್ ಇಂಪ್ಲಾಂಟ್ ಸಾಧನ, ಶಸ್ತ್ರಚಿಕಿತ್ಸೆ ಮತ್ತು ನಂತರದ ವಾಕ್‍ಶ್ರವಣ ಪುನಶ್ಚೇತನ ಚಿಕಿತ್ಸೆ ಇವೆಲ್ಲವೂ ಉಚಿತವಾಗಿರುತ್ತದೆ. ಹಾಗೂ ವಾಕ್‍ಶ್ರವಣ ಪುನಶ್ಚೇತನ ಚಿಕಿತ್ಸೆ ಕ್ಲಿಷ್ಟಕರವಾಗಿದ್ದು ಇದು 8 ರಿಂದ 10 ತಿಂಗಳು ಹಿಡಿಯುತ್ತದೆ.
ಅನೇಕ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ಮತ್ತು ಅನೇಕ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಮೆಗ್ಗಾನ್ ಆಸ್ಪತ್ರೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗಕ್ಕೆ ಈ ಶಸ್ತ್ರಚಿಕಿತ್ಸೆಯ ಅವಕಾಶ ಹೆಮ್ಮೆಯ ಗರಿಯಾಗಿದೆ.
Shivamogga Meggan Hospital ಈ ಶಸ್ತ್ರಚಿಕಿತ್ಸೆಯನ್ನು ಕರ್ನಾಟಕದ ಖ್ಯಾತ ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಮತ್ತು ಕಿವಿ ಮೂಗು ಗಂಟಲು ತಜ್ಞರ ರಾಷ್ಟ್ರೀಯ ಅಧ್ಯಕ್ಷರಾಗಿರುವ ಬೆಂಗಳೂರಿನ ಡಾ.ಶಂಕರ್ ಮಡಿಕೇರಿಯವರು ನೆರವೇರಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪ್ರಾಧ್ಯಾಪಕ ಡಾ.ಕೆ.ಎಸ್.ಗಂಗಾಧರ, ಸಹ ಪ್ರಾಧ್ಯಾಪಕ ಡಾ.ಶ್ರೀಧರ್ ಎಸ್ ಮತ್ತು ಸೀನಿಯರ್ ರೆಸಿಡೆಂಟ್ ಡಾ.ಹಂಸ ಎಸ್ ಶೆಟ್ಟಿ ಇವರನ್ನು ತರಬೇತುಗೊಳಿಸಲಾಗುತ್ತಿದೆ.
ಇನ್ನು ಮುಂದೆ ನಿರಂತರವಾಗಿ ಆಸ್ಪತ್ರೆಯಲ್ಲಿ ಕಾಕ್ಲಿಯಾರ್ ಇಂಪ್ಲಾಂಟ್ ಚಿಕಿತ್ಸೆಯು ಪ್ರಾರಂಭವಾಗಿದ್ದು ಮಾರ್ಚ್ ತಿಂಗಳಲ್ಲಿ ಇನ್ನೂ ಮೂರು ಶಸ್ತ್ರಚಿಕಿತ್ಸೆ ಮಾಡುವ ಗುರಿ ಹೊಂದಲಾಗಿದೆ ಎಂದು ಇಎನ್‍ಟಿ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎಸ್.ಗಂಗಾಧರ, ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಎಸ್ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟಿಲ್ ತಿಳಿಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.