2022-23ನೇ ಸಾಲಿನ ಎರಡು ವರ್ಷದ ಬಿ.ಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ಅಭ್ಯರ್ಥಿಗಳ ಸೀಟು ಹಂಚಿಕೆಯ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಕಟಿಸಲಾಗಿತ್ತು.
ಇದೀಗ ಈ ಪಟ್ಟಿಯಲ್ಲಿ ದಾಖಲಾತಿಗೆ ನೀಡಲಾಗಿದಂತಹ ಅನುಮತಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2022-23ನೇ ಸಾಲಿಗೆ ಎರಡು ವರ್ಷಗಳ ಬಿ.ಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಬಿ.ಇಡಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗೆ ಕಾಲೇಜು ಸಹಿತ ಸೀಟು ಹಂಚಿಕೆಯ ಆಯ್ಕೆಪಟ್ಟಿಯನ್ನು ದಿನಾಂಕ 03-12-2022ರಂದು ಇಲಾಖಾ ವೆಬ್ ಸೈಟ್ www.schooleducation.kar.nic.in ನಲ್ಲಿ ಪ್ರಕಟಿಸಲಾಗಿತ್ತು ಎಂದು ಹೇಳಿದ್ದಾರೆ.
ಇದೀಗ ಸರ್ಕಾರವು ದಿನಾಂಕ 01-11-2022ರಿಂದ ಅನ್ವಯವಾಗುವಂತೆ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿಗೆ ಶೇ.17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.7ರಂತೆ ಮೀಸಲಾತಿ ಪ್ರಮಾಣವನ್ನು ಅನುಷ್ಠಾನಗೊಳಿಸಿ, ಪ್ರವರ್ಗವಾರು ಸೀಟು ಹಂಚಲು ರೋಸ್ಟರ್ ಪಟ್ಟಿಯನ್ನು ನಿಗದಿಪಡಿಸಿ, ಸೀಟು ಹಂಚುವ ಸಂಬಂಧ ಮಾರ್ಗದರ್ಶನ ಕೋರಲಾಗಿದೆ ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ದಿನಾಂಕ 03-12-2022ರಂದು ಪ್ರಕಟಿಸಬೇಕಿದ್ದ ಆಯ್ಕೆಪಟ್ಟಿಯನ್ನು ಮತ್ತು ದಾಖಲಾತಿಗೆ ಸಂಬಂಧಿಸಿದ ಮುಂದಿನ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಅಲ್ಲದೇ ಪ್ರಕಟಿತ ವೇಳಾಪಟ್ಟಿಯಲ್ಲಿಯೂ ವ್ಯತ್ಯಾಸ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಸೂಚಿಸಿದೆ.