ಮನುಷ್ಯ ಎಲ್ಲ ಪ್ರಾಣಿಗಳಿಗಿಂತಲೂ ಶ್ರೇಷ್ಠ. ಕಾರಣ ಆತನ ಬುದ್ಧಿಶಕ್ತಿ. ಶಾರೀರಿಕವಾಗಿ ಮನುಷ್ಯ ಬಲಹೀನನಾದರೂ ಪ್ರಾಣಿಗಳಿಗಿಂತ ಶ್ರೇಷ್ಠ ಎಂಬುದಕ್ಕೆ ಆನೆಗೆ ಶಿಕ್ಷಣ ಕೊಟ್ಟು ತಾನು ಹೇಳಿದಂತೆ ಕೇಳುವಂತೆ ಮಾಡುವ ಬುದ್ಧಿಚಾತುರ್ಯ ಅವನಲ್ಲಿದೆ. ಪಕ್ಷಿಗಳಿಗಿಂತಲೂ ವೇಗವಾಗಿ ಹೋಗುವ ಸಾಧನವನ್ನು ಮನುಷ್ಯ ಕಂಡು ಹಿಡಿದಿದ್ದಾನೆ. ಮೀನಿನಂತೆ ಈಜಲಾಗದಿದ್ದರೂ ಬಹು ಹೊತ್ತು ನೀರೊಳಗಿದ್ದು ಕೆಲಸ ಮಾಡುವ ಪರಿಕರಗಳನ್ನು ಅನ್ವೇಶಿಸಿದ್ದಾನೆ.
ಹಾಗಾಗಿ ಬುದ್ಧಿಶಕ್ತಿ ಭಗವಂತ ನಮಗೆ ನೀಡಿದ ದೊಡ್ಡ ಆಸ್ತಿ. ಈ ಬುದ್ಧಿಯಲ್ಲಿ ನಾಲ್ಕು ವಿಭಾಗ ಮಾಡಿದ್ದಾರೆ. ಪ್ರಕೃತಿಯಲ್ಲಿ ಏನು ನಡೆಯುತ್ತಾ ಇದೆ ಎಂಬುದನ್ನು ಗಮನಿಸುವ ಶಕ್ತಿ ಇರುವುದು ಬುದ್ಧಿ.
ಮುಂದೆ ಏನು ನಡೆಯುತ್ತದೆ ಎಂಬುದು ಗೊತ್ತಾಗುವುದು ಮತಿ. ಹಿಂದೆ ನಡೆದ ಎಲ್ಲಾ ವಿಷಯಗಳೂ ಜ್ಞಾಪಕದಲ್ಲಿರುವುದು ಸ್ಮೃತಿ. ಕೊನೆಯದಾಗಿ ಈಗೇನು ನಡೆಯುತ್ತಿದೆ? ಮುಂದೇನು ನಡೆಯಲಿದೆ? ಹಿಂದೆ ಏನು ನಡೆದಿತ್ತು? ಈ ಮೂರನ್ನೂ ತಿಳಿಯುವ ಸಾಮರ್ಥ್ಯ ಇರುವುದು ಪ್ರಜ್ಞಾ ಎಂದು. ಈ ವಿದ್ಯಾಸಂಸ್ಥೆಗೆ ಪ್ರಜ್ಞಾ ಎಂಬ ಹೆಸರಿನ ಸಾರ್ಥಕತೆ ಬರುವಂತಹ ವಿದ್ಯಾರ್ಥಿಗಳು ನೀವಾಗಿ.
ಪ್ರಜ್ಞಾಶಾಲಿಗಳಾಗಿ ಎಂದು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಪೇಸ್ ಪಿ. ಯು ಕಾಲೇಜಿನ ಅನ್ನಪೂರ್ಣಾ ಭೋಜನಾಲಯವನ್ನು ಉದ್ಘಾಟನೆ ಮಾಡಿ ವಿದ್ಯಾರ್ಥಿಗಳಿಗೆ ಅನುಗ್ರಹ ಸಂದೇಶಸಲ್ಲಿ ಶೃಂಗೇರಿ ಶಾರದಾ ಪೀಠದ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ನುಡಿದರು. ಇದು ಅತ್ಯಂತ ಅಮೂಲ್ಯವಾದ ಸಮಯ.
ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಲಕ್ಷ್ಯವನ್ನಿಟ್ಟುಕೊಂಡು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕು. ವಿದ್ಯಾಭ್ಯಾಸ ಎಂದರೆ ಮೊಸರೊಳಗಿಂದ ಬೆಣ್ಣೆ ಬರುವವರೆಗೂ ಕಡೆಯುತ್ತೇವಲ್ಲ ಹಾಗೆ ವಿದ್ಯೆ ಅರಿವಾಗುವವರೆಗೂ ಅಭ್ಯಾಸ ಮಾಡಬೇಕು.
ಸನಾತನ ಧರ್ಮ ಅತ್ಯಂತ ಶ್ರೇಷ್ಠವಾದ ಧರ್ಮ.
ವಿದ್ಯಾಭ್ಯಾಸದ ನಂತರ ನೀವು ಪ್ರಪಂಚದ ಯಾವ ಮೂಲೆಗೆ ಹೋದರೂ ನಿಮ್ಮ ಮೂಲವನ್ನು ಮರೆಯಬಾರದು., ಸಂಸ್ಕಾರ ಎಂದಿಗೂ ಬಿಡಬಾರದು. ನಮ್ಮ ಬಾರತೀಯ ಸನಾತನ ಧರ್ಮದಲ್ಲಿ ಎರಡು ಸಂಗತಿಗಳನ್ನು ಪ್ರಮುಖವಾಗಿ ಹೇಳಿದ್ದಾರೆ. ಮನುಷ್ಯ ಜಗನ್ನಿಯಾಮಕನಾದ ಭಗವಂತನ ಅನುಗ್ರಹ ಪಡೆಯಲು ಏನು ಮಾಡಬೇಕು ಹಾಗೂ ಮನುಷ್ಯ ಒಬ್ಬ ಸಜ್ಜನನಾಗಿ ಜೀವನ ನಡೆಸಿ ಪ್ರಪಂಚಕ್ಕೆ ತನ್ನಿಂದ ಒಳ್ಳೆಯದಾಗಬೇಕೆಂದು ಬಯಸಬೇಕು.
ಇದನ್ನು ಪಾಲಿಸಿ ಎಂದು ಎಲ್ಲರನ್ನೂ ಅನುಗ್ರಹಿಸಿದರು.
ಕಾರ್ಯಕ್ರಮದಲ್ಲಿ ಪ್ರಜ್ಞಾ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರು ಮಾನ್ಯ ಶಾಸಕರಾದ ಶ್ರೀ ಕೆ . ಎಸ್ . ಈಶ್ವರಪ್ಪ, ಉಪಾಧ್ಯಕ್ಷರಾದ ಪ್ರೊ. ಆನಂದ್ , ಕಾರ್ಯದರ್ಶಿಗಳು ಹಾಗೂ ಪ್ರಾಚಾರ್ಯರಾದ ಪ್ರೊ. ಬಿ. ಎನ್. ವಿಶ್ವನಾಥಯ್ಯ, ನಿರ್ದೇಶಕರುಗಳಾದ ಪ್ರೊ ಹೆಚ್. ಆರ್. ಶಂಕರನಾರಾಯಣ ಶಾಸ್ತ್ರಿ ಹಾಗೂ ಡಾ. ಮೈಥಿಲಿ ಸಿ. ಉಪಸ್ಥಿತರಿದ್ದರು.