ಚಾಮರಾಜನಗರ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಎಚ್‌ಐವಿ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿದೆ. ಆರೋಗ್ಯ ಇಲಾಖೆಯ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ, ಸೋಂಕಿತರು ಪೂರ್ಣ ಪ್ರಮಾಣದಲ್ಲಿ ಮುಖ್ಯವಾಹಿನಿಗೆ ಬರುತ್ತಿಲ್ಲ.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ನೀಡಿರುವ ಮಾಹಿತಿ ಪ್ರಕಾರ, 2008ರಿಂದ 2022ರ ಅಕ್ಟೋಬರ್‌ವರೆಗೆ 4,306 ಎಚ್‌ಐವಿ ಸೋಂಕಿನ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ. ಈ ಪೈಕಿ 2,258 ಪುರುಷರು, 2,032 ಮಹಿಳೆಯರು (226 ಗರ್ಭಿಣಿಯರು) ಹಾಗೂ 16 ಮಂದಿ ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ. 1,661 ಮಂದಿ ಮೃತಪಟ್ಟಿದ್ದಾರೆ.
ಹೊರ ಜಿಲ್ಲೆಗಳು, ಹೊರ ರಾಜ್ಯದವರು ಸೇರಿದಂತೆ ಜಿಲ್ಲೆಯಲ್ಲಿ ಈ ವರೆಗೆ 5,075 ಎಚ್‌ಐವಿ ಸೋಂಕಿತರು ನೋಂದಣಿಯಾಗಿದ್ದಾರೆ. ಈ ಪೈಕಿ ಸದ್ಯ 2,509 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 1,809 ಮಂದಿ ನಿಧನರಾಗಿದ್ದಾರೆ. 757 ಮಂದಿ ಆರೋಗ್ಯ ಇಲಾಖೆ ನೀಡುವ ಚಿಕಿತ್ಸೆಯನ್ನು ಪಡೆಯುತ್ತಿಲ್ಲ.
ಇದರಲ್ಲಿ ಬಹುತೇಕರು ಖಾಸಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ಕಳಂಕ ಹಾಗೂ ತಾರತಮ್ಯದ ಭೀತಿಯಿಂದ ಚಿಕಿತ್ಸೆಯಿಂದ ದೂರ ಉಳಿದಿದ್ದಾರೆ. ಎಲ್ಲರಿಗೂ ಕೌನ್ಸೆಲಿಂಗ್ ಮಾಡಿ, ಅವರಿಗೆ ಚಿಕಿತ್ಸೆಯ ಅಗತ್ಯದ ಬಗ್ಗೆ ತಿಳಿ ಹೇಳುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.
ಏಡ್ಸ್ ನಿಯಂತ್ರಣ ಕಾರ್ಯಕ್ರಮ 2008ರಿಂದ ಜಾರಿಗೆ ಬಂದಿದ್ದು, 14 ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಎಚ್‌ಐವಿ ಸೋಂಕಿನ ಅಂಕಿ ಅಂಶಗಳನ್ನು ಗಮನಿಸಿದರೆ ಪ್ರಕರಣಗಳು ಇಳಿಮುಖವಾಗುತ್ತಿವೆ. ಗರ್ಭಿಣಿಯರಲ್ಲೂ ಸೋಂಕಿನ ಪ್ರಮಾಣ ಇಳಿದಿದೆ. ಕಳೆದ ವರ್ಷ ಇದು ಶೂನ್ಯವಾಗಿತ್ತು.
ಚಿಕಿತ್ಸಾ ವ್ಯವಸ್ಥೆ: ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯು ಎಚ್‌ಐವಿ ಸೋಂಕು ಪತ್ತೆ ಹಾಗೂ ಚಿಕಿತ್ಸೆ ಕಾರ್ಯದಲ್ಲಿ ತೊಡಗಿದೆ.
ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಸೋಂಕು ಪತ್ತೆ ಹಾಗೂ ಕೌಂನ್ಸೆಲಿಂಗ್ ಗಾಗಿ ಎಂಟು ಕೇಂದ್ರಗಳಿವೆ (ಐಸಿಟಿಸಿ). ಒಂದು ಸಂಚಾರಿ ಘಟಕವಿದ್ದು, ಬುಡಕಟ್ಟು ಸಮುದಾಯದವರ ಪರೀಕ್ಷೆಗಾಗಿ ಬಳಕೆಯಾಗುತ್ತಿದೆ. ಜಿಲ್ಲೆಯ 64 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರು ಖಾಸಗಿ ಕೇಂದ್ರಗಳಲ್ಲಿ ಉಚಿತ ಎಚ್‌ಐವಿ ಪರೀಕ್ಷೆ ಲಭ್ಯವಿದೆ. ಚಾಮರಾಜನಗರ ಹಾಗೂ ಕೊಳ್ಳೇಗಾಲದಲ್ಲಿ ಎಆರ್‌ಟಿ ಕೇಂದ್ರಗಳಿವೆ.