ಭಾರತದ ಇತಿಹಾಸವನ್ನು ಮತ್ತೆ ಬರೆಯಲು ಇತಿಹಾಸಕಾರರಿಗೆ ಕರೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಇತಿಹಾಸವನ್ನು ಪುನರ್ರಚಿಸುವವರಿಗೆ ಕೇಂದ್ರ ಸರ್ಕಾರ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.
ದೆಹಲಿಯಲ್ಲಿ ಅಸ್ಸಾಂ ಸರ್ಕಾರ ಏರ್ಪಡಿಸಿರುವ 17ನೇ ಶತಮಾನದ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ 400ನೇ ಜನ್ಮ ವಾರ್ಷಿಕೋತ್ಸವದ ಮೂರು ದಿನಗಳ ಆಚರಣೆಯ 2ನೇ ದಿನದಂದು ಅಮಿತ್ ಷಾ ಮಾತನಾಡಿದರು.
ನಾನು ಕೂಡ ಇತಿಹಾಸದ ವಿದ್ಯಾರ್ಥಿ ಮತ್ತು ನಮ್ಮ ದೇಶದ ಇತಿಹಾಸವನ್ನು ಸರಿಯಾಗಿ ಪ್ರಸ್ತುತ ಪಡಿಸಿಲ್ಲ ಎಂಬ ಮಾತುಗಳನ್ನು ಅನೇಕ ಬಾರಿ ಕೇಳಿದ್ದೇನೆ. ಅದು ನಿಜವೂ ಇರಬಹುದು. ಆದರೆ, ಈಗ ಅದನ್ನು ಸರಿಪಡಿಸಬೇಕಿದೆ ಎಂದು ಅಮಿತ್ ಷಾ ಹೇಳಿದರು.
ಇಲ್ಲಿ ಕುಳಿತಿರುವ ಎಲ್ಲ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಲ್ಲಿ ನಾನೊಂದು ಮನವಿ ಮಾಡಿಕೊಳ್ಳುತ್ತೇನೆ. ಇತಿಹಾಸ ಸರಿಯಲ್ಲ ಎಂಬ ಕೂಗು ಇನ್ನು ಮುಂದೆ ಕೇಳದಂತೆ ಸರಿಪಡಿಸಲು ಮತ್ತು ದೇಶದಲ್ಲಿ 150 ವರ್ಷಗಳ ಕಾಲ ಆಳಿದ 30 ರಾಜವಂಶಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ 300 ಗಣ್ಯ ವ್ಯಕ್ತಿಗಳ ಬಗ್ಗೆ ಸಂಶೋಧನೆ ಮಾಡಲು ಪ್ರಯತ್ನಿಸುವಂತೆ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಒಮ್ಮೆ ಇತಿಹಾಸವನ್ನು ಮರು ಬರೆದರೆ ಸಾಕು, ಸುಳ್ಳು ನಿರೂಪಣೆಯನ್ನು ಪ್ರಚಾರ ಮಾಡಲಾಗುತ್ತದೆ ಎಂಬ ಕಲ್ಪನೆಯು ಇರುವುದಿಲ್ಲ ಎಂದರು. ಅಲ್ಲದೆ, ವಿಜ್ಞಾನ ಭವನದಲ್ಲಿ ಹಾಜರಿರುವ ಇತಿಹಾಸಕಾರರು ಮತ್ತು ವಿದ್ಯಾರ್ಥಿಗಳ ಸಂಶೋಧನೆಗೆ ಕೇಂದ್ರವು ಬೆಂಬಲ ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.
ಮುಂದೆ ಬನ್ನಿ, ಸಂಶೋಧನೆ ಮಾಡಿ ಮತ್ತು ಇತಿಹಾಸವನ್ನು ಪುನಃ ಬರೆಯಿರಿ. ಈ ರೀತಿಯಾಗಿ ನಾವು ಭವಿಷ್ಯದ ಪೀಳಿಗೆಗೂ ಸ್ಫೂರ್ತಿ ನೀಡಬಹುದು ಎಂದು ಅಮಿತ್ ಷಾ ಕರೆ ನೀಡಿದರು.