ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಜಾಗತಿಕ ನಾಯಕರೊಂದಿಗೆ ಆತ್ಮೀಯವಾಗಿ ಕಾಣಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳು ಕಳೆದ ಮೂರ್ನಾಲ್ಕು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಜಿ20 ಶೃಂಗಸಭೆಯ ಆರಂಭದ ದಿನ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕೈಕುಲುಕಿ, ತಬ್ಬಿಕೊಂಡ ವಿಡಿಯೋ ಭಾರೀ ವೈರಲ್ ಆಗಿತ್ತು. ಇದೀಗ ಶೃಂಗಸಭೆ ಮುಗಿದಿದ್ದು, ಈ ವೇಳೆ ಅನೌಪಚಾರಿಕ ಭೇಟಿಯ ವೇಳೆ ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೆಲ್ಯೂಟ್ ಹೊಡೆದಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.
ಜಿ20 ಶೃಂಗಸಭೆಯ ಆರಂಭಕ್ಕೂ ಮೊದಲು ತಮ್ಮ ಕುರ್ಚಿಗಳಲ್ಲಿ ಕುಳಿತುಕೊಳ್ಳುವಾಗ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಬಂದ ಜೋ ಬೈಡೆನ್
ಮೋದಿಯನ್ನು ತಬ್ಬಿಕೊಂಡು, ಹ್ಯಾಂಡ್ ಶೇಕ್ ಮಾಡಿದ್ದರು.
ಬಳಿಕ ಜೋ ಬೈಡೆನ್ ಜೊತೆ ತಮಾಷೆಯಾಗಿ ಮಾತನಾಡಿದ ಮೋದಿ ತಮ್ಮ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಅಮೆರಿಕದ ಅಧ್ಯಕ್ಷರಿಗೆ ಸೂಚಿಸಿದ್ದರು.
ಇದೀಗ ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಬಾಲಿಯ ಮ್ಯಾಂಗ್ರೋವ್ ಅರಣ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ- ಅಮೆರಿಕಾದ ನಾಯಕರು ಭೇಟಿಯಾದಾಗ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಯೂಟ್ ಹೊಡೆದಿದ್ದಾರೆ.
ಅದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜೋ ಬೈಡೆನ್ ಕಡೆಗೆ ಕೈ ಬೀಸಿದ್ದಾರೆ.
ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಮುಂದಿನ ವರ್ಷದ ಜಿ20 ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಲಾಯಿತು.
ಈ ವೇಳೆ ಉಕ್ರೇನ್ ಮೇಲಿನ ಯುದ್ಧಕ್ಕೆ ರಷ್ಯಾ ಅಂತ್ಯ ಹಾಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಶಾಂತಿ ಮಂತ್ರಕ್ಕೆ ಜಿ20 ಶೃಂಗಸಭೆಯ ಸದಸ್ಯ ರಾಷ್ಟ್ರಗಳಿಂದ ಒಮ್ಮತದ ಬೆಂಬಲ ದೊರಕಿದೆ.
ಜಿ20 ಶೃಂಗಸಭೆಯ ನಿರ್ಣಯದಲ್ಲಿ ರಷ್ಯಾ ಅಧಯಕ್ಷ ವ್ಲಾಡಿಮಿರ್ ಪುಟಿನ್ಗೆ ಉಕ್ರೇನ್ ಮೇಲಿನ ಯುದ್ಧ ನಿಲ್ಲಿಸುವಂತೆ ಸಂದೇಶ ರವಾನಿಸಲಾಗಿದೆ.