ಅಮೆರಿಕ ನೇತೃತ್ವದ ಸೇನಾ ಮೈತ್ರಿಕೂಟ ನ್ಯಾಟೊಗೆ ಉಕ್ರೇನ್ ಸೇರಿದರೆ, ಆ ರಾಷ್ಟ್ರದಲ್ಲಿನ ಸಂಘರ್ಷವು ಮೂರನೇ ಮಹಾಯುದ್ಧಕ್ಕೆ ದಾರಿಯಾಗುವುದು ಖಚಿತ ಎಂದು ರಷ್ಯಾದ ಭದ್ರತಾ ಸಮಿತಿ ಗುರುವಾರ ಗಂಭೀರ ಎಚ್ಚರಿಕೆ ನೀಡಿದೆ.
ನ್ಯಾಟೊ ಸೇರಿದರೆ ಸಂಘರ್ಷ ಉಲ್ಬಣಿಸಿ, ಮೂರನೇ ವಿಶ್ವ ಸಮರ ಸಂಭವಿಸುವುದು ಖಚಿತ ಎನ್ನುವುದು ಉಕ್ರೇನ್‌ಗೂ ಚೆನ್ನಾಗಿಯೇ ಗೊತ್ತಿದೆ’ ಎಂದು ರಷ್ಯಾದ ಭದ್ರತಾ ಮಂಡಳಿಯ ಉಪ ಕಾರ್ಯದರ್ಶಿ ಅಲೆಕ್ಸಾಂಡರ್ ವೆನೆಡಿಕ್ಟೊವ್ ಹೇಳಿದ್ದಾರೆ. ಈ ಹೇಳಿಕೆ ಉಲ್ಲೇಖಿಸಿ ರಷ್ಯಾದ ಸರ್ಕಾರಿ ನಿಯಂತ್ರಣ ಸುದ್ದಿಸಂಸ್ಥೆ ‘ಟಾಸ್’ ಕೂಡ ವರದಿ ಮಾಡಿದೆ.
‘ಉಕ್ರೇನ್‌ಗೆ ಸದಸ್ಯತ್ವ ನೀಡುವ ಕೋರಿಕೆ ಪರಿಗಣಿಸಿದರೆ ಅದರಿಂದ ಆಗುವ ಸಂಘರ್ಷದ ಪರಿಣಾಮದ ಅರಿವು ಪಶ್ಚಿಮದ ರಾಷ್ಟ್ರಗಳಿಗಿದೆ. ಸದಸ್ಯತ್ವ ನೀಡುವ ತೀರ್ಮಾನ ಸ್ವಾಭಾವಿಕವಾಗಿ ಆತ್ಮಹತ್ಯೆಗೆ ಸಮಾನ ಎನ್ನುವುದನ್ನು ನ್ಯಾಟೊ ಸದಸ್ಯ ರಾಷ್ಟ್ರಗಳು ಅರ್ಥ ಮಾಡಿಕೊಂಡಿವೆ’ ಎಂದು ವೆನೆಡಿಕ್ಟೊವ್ ಹೇಳಿದ್ದಾರೆ.
ಸೆ.30ರಂದು ಪುಟಿನ್ ಅವರು ಆಕ್ರಮಿಸಿಕೊಂಡಿರುವ ಉಕ್ರೇನ್‌ನ ಶೇ 18ರಷ್ಟು ಭೂಪ್ರದೇಶವನ್ನು ರಷ್ಯಾ ಸ್ವಾಧೀನಕ್ಕೆ ಸೇರಿಸಿಕೊಳ್ಳುತ್ತಿರುವುದಾಗಿ ಔಪಚಾರಿಕ ಘೋಷಣೆ ಹೊರಡಿಸಿದ ಕೆಲವೇ ಗಂಟೆಗಳಲ್ಲಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ನ್ಯಾಟೊದ ತ್ವರಿತಗತಿಯ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿರುವುದಾಗಿ ಅಚ್ಚರಿಯ ಘೋಷಣೆ ಮಾಡಿದ್ದರು.
ಅಣ್ವಸ್ತ್ರ ಸಂಘರ್ಷದ ಪರಿಣಾಮ ಇಡೀ ಭೂಮಂಡಲಕ್ಕೆ: ಅಣ್ವಸ್ತ್ರ ಸಂಘರ್ಷದ ಪರಿಣಾಮ ರಷ್ಯಾ ಮತ್ತು ಪಶ್ಚಿಮದ ಸಂಘಟಿತ ರಾಷ್ಟ್ರಗಳಿಗಷ್ಟೇ ಸೀಮಿತವಾಗುವುದಿಲ್ಲ, ಈ ಗ್ರಹದ ಪ್ರತಿ ದೇಶದ ಮೇಲೂ ದುರಂತ ಉಂಟು ಮಾಡುತ್ತದೆ. ಮನುಕುಲಕ್ಕೆ ವಿನಾಶಕಾರಿಯಾಗಿದೆ. ರಷ್ಯಾ ವಿರುದ್ಧ ರಕ್ಷಣಾತ್ಮಕ ದಾಳಿಗೆ ಝೆಲೆನ್‌ಸ್ಕಿ ಕರೆ ನೀಡಿರುವುದು ಅತ್ಯಂತ ಅಪಾಯಕಾರಿಯಾದುದು ಎಂದು ವೆನೆಡಿಕ್ಟೊವ್ ಹೇಳಿದರು.
ರಷ್ಯಾ ಮತ್ತು ಅಮೆರಿಕ ಅತಿದೊಡ್ಡ ಅಣ್ವಸ್ತ್ರ ಶಕ್ತಿ ರಾಷ್ಟ್ರಗಳಾಗಿವೆ. ವಿಶ್ವದಲ್ಲಿರುವ ಅಣು ಸಿಡಿತಲೆಗಳಲ್ಲಿ ಶೇ 90ರಷ್ಟು ಈ 2 ರಾಷ್ಟ್ರಗಳ ಬತ್ತಳಿಕೆಯಲ್ಲಿವೆ.