ಪಂದ್ಯದ ಆರಂಭದಲ್ಲಿ ಉತ್ತಮವಾಗಿ ಆಡಿದ ಬೆಂಗಳೂರು ಬುಲ್ಸ್ ತಂಡವನ್ನು ಬೆಂಗಾಲ್ ವಾರಿಯರ್ಸ್ ತಂಡವು ಕೊನೆಗೂ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬುಲ್ಸ್ ತಂಡದ ಹ್ಯಾಟ್ರಿಕ್ ಜಯದ ಕನಸು ಕೈಗೂಡಲಿಲ್ಲ.
ಬೆಂಗಾಲ್ ತಂಡವು 42-33ರಿಂದ ಗೆದ್ದಿತು. ಬೆಂಗಳೂರು ತಂಡವು ಮೊದಲೆರಡು ಪಂದ್ಯಗಳಲ್ಲಿ ಜಯಿಸಿತ್ತು.
ತವರಿನ ಪ್ರೇಕ್ಷಕರ ಮುಂದೆ ಮೊದಲಾರ್ಧದದಲ್ಲಿಯೇ 14-15ರಿಂದ ಬೆಂಗಳೂರು ತಂಡವು ಹಿನ್ನಡೆ ಅನುಭವಿಸಿತ್ತು. ವಿರಾಮದ ನಂತರ ಬೆಂಗಳೂರು ತಂಡವು ತಿರುಗೇಟು ನೀಡುವ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರಿಗೆ ನಿರಾಶೆಯಾಯಿತು. ತಂಡದ ಭರತ್ (8) ಹಾಗೂ ವಿಕಾಶ್ ಖಂಡೋಲಾ (7) ಉತ್ತಮವಾಗಿ ಆಡಿದರು.
ಆದರೆ ಬೆಂಗಾಲ್ ತಂಡಕ್ಕೆ ನಾಯಕ ಮಣಿಂದರ್ ಸಿಂಗ್ (11) ಸೂಪರ್ ಟೆನ್ ರೇಡ್‌ಗಳ ಬಲದಿಂದ ಜಯ ಒಲಿಯಿತು. ತಂಡವು ಮೂರು ಪಂದ್ಯಗಳಲ್ಲಿ ಎರಡು ಜಯ ಹಾಗೂ ಒಂದರಲ್ಲಿ ಡ್ರಾ ಸಾಧಿಸಿದೆ. ಶ್ರೀಕಾಂತ್ ಜಾಧವ್ (6) ಹಾಗೂ ಗಿರೀಶ್ ಮಾರುತಿ (5) ಆಲ್‌ರೌಂಡ್ ಆಟವಾಡಿದರು.
ಆದರೆ ಬೆಂಗಾಲ್ ತಂಡದ ಪ್ರಮುಖ ಆಟಗಾರ ದೀಪಕ್ ಹೂಡಾ 10 ಬಾರಿ ದಾಳಿಗೆ ತೆರಳಿದರೂ ಒಂದು ಅಂಕ ಮಾತ್ರ ಗಳಿಸಿದರು.