ಅಶ್ಲೀಲತೆ ಪ್ರದರ್ಶಿಸುವ ‘ಬಿಗ್ ಬಾಸ್’ ರಿಯಾಲಿಟಿ ಶೋ ನಿಷೇಧಿಸುವಂತೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಆಂಧ್ರಪ್ರದೇಶ ಹೈಕೋರ್ಟ್ ಶುಕ್ರವಾರ ನಡೆಸಿದೆ.
ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ಶಿವಪ್ರಸಾದ್ ರೆಡ್ಡಿ ವಾದ ಮಂಡಿಸಿ, ‘ಬಿಗ್ ಬಾಸ್’ನಲ್ಲಿ ಸಾಕಷ್ಟು ಅಶ್ಲೀಲತೆ ಇದೆ. ಟಿವಿ ಶೋಗಳು ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಫೌಂಡೇಶನ್(ಐಬಿಎಫ್) ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಲು ಕೇಂದ್ರದ ಪರ ವಕೀಲರು ಕಾಲಾವಕಾಶ ಕೋರಿದ್ದಾರೆ. ‘ಬಿಗ್ ಬಾಸ್’ನಲ್ಲಿ ಅಶ್ಲೀಲತೆಯ ಬಗ್ಗೆ ಎಪಿ ಹೈಕೋರ್ಟ್ ತೀವ್ರವಾಗಿ ಪ್ರತಿಕ್ರಿಯಿಸಿದೆ. 1970ರ ದಶಕದಲ್ಲಿ ಯಾವ ರೀತಿಯ ಚಿತ್ರಗಳನ್ನು ನಿರ್ಮಿಸಲಾಗಿತ್ತು ಮತ್ತು ಈಗ ಯಾವ ರೀತಿಯ ಚಿತ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಪ್ರತಿವಾದಿಗಳಿಗೆ ನೋಟಿಸ್ ನೀಡುವ ಕುರಿತು ಮುಂದಿನ ವಿಚಾರಣೆ ವೇಳೆ ತೀರ್ಮಾನಿಸುವುದಾಗಿ ಹೇಳಿದ್ದು, ವಿಚಾರಣೆಯನ್ನು ಅಕ್ಟೋಬರ್ 11ಕ್ಕೆ ಮುಂದೂಡಿದೆ.