ವಿದೆಶೀ ಸಂಸ್ಕೃತಿಯಿಂದ ಭಾರತಕ್ಕೆ ಸ್ವಲ್ಪ ದಕ್ಕೆಯಾಗಿದೆ. ಭಗವಂತ ಅವತಾರ ಮಾಡಿದ ದೇಶ ಭಾರತ, ಯಾರೂ ನಮ್ಮನ್ನು ನಾಶಮಾಡಲು ಸಾದ್ಯವಿಲ್ಲ ಇಲ್ಲಿ ಗುರುಶಿಷ್ಯ ಪದ್ಧತಿ ಇನ್ನೂ ಜೀವಂತವಾಗಿ ಇದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ತಿಳಿಸಿದರು.
ಅವರು ಶನಿವಾರ ನಗರದ ಬಾಪೂಜಿ ಅಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನವದೆಹಲಿಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಅನೌಪಚಾರಿಕ ಸಂಸ್ಕೃತ ಅಧ್ಯಯನದ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತ ಭಾರತದಲ್ಲಿ ಭರತನಾಟ್ಯ, ಸಂಗೀತ, ಸಂಸ್ಕೃತ ಇನ್ನೂ ಮುಂತಾದ ವಿದ್ಯೆ ಕಲಿಯುವ ಮುನ್ನ ವಿದ್ಯಾರ್ಥಿಗಳು ಗುರುವಿಗೆ ನಮಸ್ಕರಿಸಿ ತಮ್ಮ ವಿದ್ಯಾಬ್ಯಾಸ ಆರಂಬಿಸುತ್ತಾರೆ.
ಇಂತಹ ಶಿಕ್ಷಣ ನೀಡುವ ಸಂಸ್ಕೃತವನ್ನು ಬ್ರಿಟೀಷ್ ಆಡಳಿತದಲ್ಲಿ ಮೆಕಾಲೆ ಎಂಬ ಅಧಿಕಾರಿ ಗಮನಿಸಿ ಸಂಸ್ಕೃತ ಕಲಿಕೆಗೆ ಕಡಿವಾಣ ಹಾಕುತ್ತಾನೆ ಅಲ್ಲದೆ ನಳಂದ ವಿಶ್ವ ವಿದ್ಯಾಲಯದ ಮಹತ್ವವಾದ ಸಂಸ್ಕೃತ ಗ್ರಂಥ ಭಂಡಾರವನ್ನು ಸುಟ್ಟುಹಾಕುತ್ತಾನೆ.
ಸಂಸ್ಕೃತ, ಸಂಸ್ಕೃತಿ ಕಲಿಸುವ ಒಂದು ಪ್ರಭಾವಿ ಭಾಷೆಯಾಗಿದೆ. ಈ ದೇಶದ ಪ್ರಮುಖ ಗ್ರಂಥಗಳು, ಸಂಸ್ಕೃತ ಸಾಹಿತ್ಯದಲ್ಲಿ ಅಡಗಿದೆ, ಅದು ಪುರಾಣ, ಮಹಾಭಾರತ, ರಾಮಾಯಣ, ಮಂತ್ರ, ನಾಟಕ, ಶ್ಲೋಕ, ಸುಭಾಷಿತ, ಕಥೆ ವೇದಗಳು ಹೀಗೆ ಒಂದೊಂದು ಕಡೆಯಲ್ಲೂ ಒಂದೊಂದು ರೂಪದಲ್ಲಿ ನಮ್ಮ ನೆಲದ ಆಚಾರ, ವಿಚಾರ ಮತ್ತು ಸಂಸ್ಕೃತಿಯನ್ನು ತುಂಬಿ ನಮ್ಮ ಋಷಿ ಮುನಿಗಳು ನಮಗೆ ನೀಡಿದ್ದಾರೆ.
ಇಂತಹ ಸಂಪತ್ಭರಿತ ವಾದ ಭಾಷೆಯ ಪುನರುಜ್ಜೀವನ ಯಶಸ್ವಿಯಾಗಿ ನಡೆಯುತ್ತ ಮುಂದೆ ಬರುತ್ತಿದೆ ಎಂದರು. ಇದಕ್ಕಾಗಿಯೇ ದೇಶ ವಿದೇಶದಲ್ಲಿ ಸಂಸ್ಕೃತ ಭಾರತಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತ ಬಂದಿದೆ. ಹಾಗಾಗಿ ಇಂದು ಕೋಟ್ಯಾಂತರ ಜನ ವಯೋಮಿತಿ, ಜಾತಿಬೇದ ವಿಲ್ಲದೆ ಸಂಸ್ಕೃತ ಕಲಿಯುತ್ತಿದ್ದಾರೆ ಎಂದು ಸಂಸ್ಕೃತ ಭಾರತಿಯ ಚಟುವಟಿಕೆಗಳನ್ನು ಅಭಿನಂದಿಸಿದರು.
ಭಾರತದ ಶ್ರೇಷ್ಠತೆಯಲ್ಲಿ ಸಂಸ್ಕೃತ ಮುಂದಿದೆ, ಸಂಸ್ಕೃತ ವೈಜ್ಞಾನಿಕ ಭಾಷೆ, ಈ ಭಾಷೆಯಲ್ಲಿ ಸೊಗಡು ಇದೆ, ಭಗವಂತ ನಿರ್ಮಾಣ ಮಾಡಿಕೊಟ್ಟ ಭಾಷೆ ಸಂಸ್ಕೃತ, ಭಾರತೀಯ ಎಲ್ಲಾ ಭಾಷೆಗಳಿಗೂ ಮೂಲ ಸಂಸ್ಕೃತವೇ ಹೊರತು ಆಂಗ್ಲ ಭಾಷೆಯಲ್ಲ.
ಸಂಸ್ಕೃತ ಕಲಿಕಾ ಆಂದೋಲನ ಪ್ರಾಥಮಿಕ ಹಂತದ ವಿದ್ಯಾಲಯದಿಂದ ಆಗಬೇಕು ಎಂದು ತಿಳಿಸಿದರು. ಸಂಸ್ಕೃತ ಕಲಿತರೆ ಇತರೆ ಭಾಷಾ ಜ್ಞಾನಕ್ಕೆ ಉತ್ತಮ ಬುನಾದಿಯಾಗುತ್ತದೆ, ಎಲ್ಲಿ ಸಂಸ್ಕೃತವೊ ಅಲ್ಲಿ ಸಂಸ್ಕೃತಿ, ಎಲ್ಲಿ ಸಂಸ್ಕೃತಿ ನೆಲೆಸುತ್ತದೆಯೋ ಅಲ್ಲಿ ಪ್ರಜೆಗಳು ಅನಂದದಿಂದ ಜೀವನ ನಡೆಸುತ್ತಾರೆ ಎಂದು ಹೇಳಿದರು.
ಇದೀಗ ಕೇಂದ್ರೀಯ ವಿಶ್ವ ವಿದ್ಯಾಲಯದವರು ದೇಶಾದ್ಯಂತ ಪ್ರಮುಖ ಸಂಸ್ಥೆಗಳಲ್ಲಿ ಸಂಸ್ಕೃತ ಕಲಿಸಲು ಮುಂದಾಗಿರುವುದು ಸಂತಸ ವಿಷಯ ಇವರೆಲ್ಲರ ಪರಿಶ್ರಮದಿಂದ
ಭಾರತ ಅತೀ ಶೀಘ್ರದಲ್ಲೇ ವಿಶ್ವ ಗುರುವಾಗಿ ಹೊರಹೊಮ್ಮುತ್ತದೆ ಎಂದರು
ಪ್ರಾಸ್ತಾವಿಕವಾಗಿ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಕರ್ನಾಟಕ ರಾಜ್ಯ ಸಂಯೋಜಕರಾದ ವೆಂಕಟೇಶ ಮೂರ್ತಿ ಮಾತನಾಡಿದರು.
ಸಮಾರಂಭದಲ್ಲಿ ವಾಸವಿ ಅಕಾಡೆಮಿ ಕಾರ್ಯದರ್ಶಿ ಎಸ್.ಕೆ.ಶೇಷಾಚಲ, ಸಂಸ್ಕೃತ ಭಾರತಿ ಜಿಲ್ಲಾ ಅಧ್ಯಕ್ಷ ಎನ್.ವಿ.ಶಂಕರನಾರಾಯಣ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಅಧ್ಯಕ್ಷ ಟಿ.ವಿ.ನರಸಿಂಹ ಮೂರ್ತಿ, ಕಾಲೇಜಿನ ಶ್ರೀವತ್ಸ, ಕವಿತಾ ದೇವರಾಜ್, ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಬಾಪೂಜಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಮ್.ವಿ.ಪಿ.ಅರಾದ್ಯ ವಹಿಸಿದ್ದರು.
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಶಿಕ್ಷಕರಾದ ಸವ್ಯಸಾಚಿ ದಳಪತಿ,
ಸ್ವಾಗತಿಸಿ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪಂಕಜಕುಮಾರ್ ವಂದಿಸಿದರು.