ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ,ಸಿಂಹಧಾಮದಲ್ಲಿ ಅತ್ಯಂತ ಹಿರಿಯ ಹುಲಿ ಎಂದು ಖ್ಯಾತಿ ಪಡೆದಿರುವ 20 ವರ್ಷದ ವಯಸ್ಸಿನ ಹುಲಿ ಹನುಮ ಬುಧವಾರ ರಾತ್ರಿ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ.
ಹುಲಿ,ಸಿಂಹ ಧಾಮದಲ್ಲಿಯೇ ಇದ್ದ ಚಾಮುಂಡಿ ಮತ್ತು ಮಲೇಶಂಕರ ಹುಲಿಗಳ ಸಾಂಗತ್ಯದಿಂದಾಗಿ ರಾಮ, ವಾಲಿ ಮತ್ತು ಹನುಮ ಎಂಬ 3 ಗಂಡು ಹುಲಿಗಳು 2002ರಲ್ಲಿ ಜನಿಸಿದ್ದವು.
ಅದರಲ್ಲಿ ಹನುಮ ಅತಿ ದೀರ್ಘ ಅವಧಿಯಿಂದ ಈ ವನ್ಯಧಾಮದಲ್ಲಿ ಇರುವ ಹುಲಿ ಎಂಬ ಶ್ರೇಯಕ್ಕೆ ಪಾತ್ರವಾಗಿತ್ತು. ಜೊತೆಗೆ ಪ್ರವಾಸಿಗರ ಆಕರ್ಷಣೆಗೂ ಕಾರಣವಾಗಿತ್ತು.
ಹನುಮನ ಸಾವಿನಿಂದ ವನ್ಯಧಾಮದಲ್ಲಿ ಈಗ ಹುಲಿಗಳ ಸಂಖ್ಯೆ ನಾಲ್ಕಕ್ಕೆ ಇಳಿದಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಹುಲಿ, ಸಿಂಹಧಾಮದಲ್ಲಿ ವಾಲಿ, ಭರತ, ಹನುಮ ಸೇರಿ 3 ಹುಲಿಗಳು ಸಾವನ್ನಪ್ಪಿವೆ.
ಸಾವಿಗೀಡಾದ ಹುಲಿ ಹನುಮನ ಮರಣೋತ್ತರ ಪರೀಕ್ಷೆ ನಡೆಸಿ ಗುರುವಾರ ವನ್ಯಧಾಮದಲ್ಲಿಯೇ ಅಂತ್ಯಕ್ರಿಯೆ ನಡೆಸಲಾಯಿತು ಎಂದು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ಕಾರ್ಯನಿರ್ವಾಹಕ ಅಧಿಕಾರಿ ಮುಕುಂದ್ ಚಂದ್ರ ಅವರು ಮಾಹಿತಿ ನೀಡಿದ್ದಾರೆ.