ಸೆ.26ರಿಂದ ನವರಾತ್ರಿ ಹಬ್ಬ ಆರಂಭವಾಗುತ್ತಿದ್ದು., ಹಬ್ಬಕ್ಕೆ ಪೂರಕವಾಗುವಂತೆ ದಸರಾ ರಜೆ ಬದಲಾವಣೆ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಸ್ಥಳೀಯ ಸನ್ನಿವೇಶಗಳಿಗೆ ತಕ್ಕಂತೆ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ ವೇಳಾಪಟ್ಟಿಯಲ್ಲಿ ಮಾರ್ಪಾಡು ಅಗತ್ಯವಿದ್ದಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಬದಲಾವಣೆಯನ್ನು ಮಾಡಿಕೊಳ್ಳಲು ಈಗಾಗಲೇ ಅನುಮತಿ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರೆ ರಜೆಯನ್ನು ನವರಾತ್ರಿ ಹಬ್ಬಕ್ಕೆ ಪೂರಕವಾಗವಂತೆ ಸೆ.26ರಿಂದ ಅ.10ರವರೆಗೆ ನೀಡುವಂತೆ ಕೋರಿಕೆ ಬಂದಿತ್ತು. ಹೀಗಾಗಿ ಪರಿಶೀಲನೆ ಮಾಡಿ ಶೈಕ್ಷಣಿಕ ಚಟುವಟಿಕೆಯನ್ನು ಸರಿದೂಗಿಸುವ ಹಾಗೂ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯನ್ನು ಆಚರಿಸುವ ಷರತ್ತಿನ ಮೇರೆಗೆ ರಜೆಯನ್ನು ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ತಿಳಿಸಿದ್ದಾರೆ.
ಇನ್ನು ನವರಾತ್ರಿ ಹಬ್ಬಕ್ಕೆ ಪೂರಕವಾಗುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ನೀಡಿದ ಮನವಿಯಂತೆ ದ.ಕ. ಜಿಲ್ಲೆಯಲ್ಲಿ ಸೆ.26ರಿಂದ ಅ.10ರವರೆಗೆ ದಸರಾ ರಜೆ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಶಾಸಕ ಕಾಮತ್, ಸೆ.26ರಿಂದ ನವರಾತ್ರಿ ಹಬ್ಬ ಪ್ರಾರಂಭವಾಗುತಿದ್ದು ಶಾಲಾ ಮಕ್ಕಳ ರಜೆಯನ್ನು ಹಬ್ಬದ ಸಂದರ್ಭದಲ್ಲಿಯೇ ನೀಡುವಂತೆ ಸಚಿವರಿಗೆ ಮನವಿ ಮಾಡಿದ್ದೆ. ಮಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯುವ ಮಂಗಳೂರು ದಸರಾ, ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿರುವ ರಥಬೀದಿ ಶಾರದಾ ಮಹೋತ್ಸವ, ಮಂಗಳಾದೇವಿ ದೇವಸ್ಥಾನ ಸೇರಿದಂತೆ ನಗರದೆಲ್ಲೆಡೆ ಅತ್ಯಂತ ಸಂಭ್ರಮದಲ್ಲಿ ದಸರಾ ಹಬ್ಬ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಅ.2ರಂದು ಗಾಂಧಿ ಜಯಂತಿ ಆಚರಿಸುವ ಷರತ್ತಿನೊಂದಿಗೆ ರಜೆ ಘೋಷಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.