‘ರಷ್ಯಾ ಜಗತ್ತು’ ಹೆಸರಿನ ನೂತನ ವಿದೇಶಾಂಗ ನೀತಿ ಸಿದ್ಧಾಂತವು ವಿದೇಶಗಳಲ್ಲಿರುವ ರಷ್ಯಾದ ಹಿತಾಸಕ್ತಿಗಳು ಹಾಗೂ ಬೆಂಬಲಿಗರಿಗೆ ಅಗತ್ಯ ನೆರವು ಒದಗಿಸುವ ನೀತಿಯನ್ನು ಬೆಂಬಲಿಸುತ್ತದೆ. ಉಕ್ರೇನ್ನೊಂದಿಗೆ ಯುದ್ಧ ಆರಂಭಿಸಿ ಆರು ತಿಂಗಳಾದ ನಂತರ 31 ಪುಟಗಳ ನೂತನ ವಿದೇಶಾಂಗ ನೀತಿಯ ಮಾರ್ಗದರ್ಶಿ ಸೂತ್ರಗಳನ್ನು ರಷ್ಯಾ ಪ್ರಕಟಿಸಿದೆ.
ಈ ದಾಖಲೆಗೆ ‘ಮಾನವೀಯ ನೀತಿ’ಎನ್ನುವ ಹೆಸರು ಕೊಡಲಾಗಿದೆ. ‘ರಷ್ಯಾದ ಜಗತ್ತಿಗೆ ಸಂಬಂಧಿಸಿದ ಎಲ್ಲ ಪರಂಪರೆ, ಆದರ್ಶಗಳನ್ನು ರಕ್ಷಿಸಬೇಕು, ಕಾಪಾಡಬೇಕು ಮತ್ತು ಮುನ್ನಡೆಸಬೇಕು’ ಎಂದು ಈ ನೀತಿಯು ತನ್ನ ಆಶಯವನ್ನು ಮುಂದಿಟ್ಟಿದೆ.
ವಿಶ್ವದಲ್ಲಿ ಒಂದೇ ಶಕ್ತಿ ಇರುವ ಬದಲು, ಹಲವು ಶಕ್ತಿಕೇಂದ್ರಗಳು ಇರುವುದನ್ನು ರಷ್ಯಾ ಬಯಸುತ್ತದೆ. ಇದಕ್ಕೆ ಪೂರಕವಾಗಿ ವಿದೇಶಗಳಲ್ಲಿರುವ ರಷ್ಯಾದ ಜನರು ಅಲ್ಲಿನ ಸರ್ಕಾರಗಳೊಂದಿಗೆ ಬಾಂಧವ್ಯ ವೃದ್ಧಿಗೆ ನೆರವಾಗುತ್ತಾರೆ’ ಎಂದು ನೀತಿಯು ಆಶಯ ವ್ಯಕ್ತಪಡಿಸಿದೆ.
ರಷ್ಯಾ ಪರವಾಗಿ ವಿಶ್ವದಲ್ಲಿ ಸಾಫ್ಟ್ ಪವರ್ ಹೆಚ್ಚಿಸುವ ಕಾರ್ಯತಂತ್ರದ ಭಾಗವಾಗಿ ಈ ನೀತಿಯನ್ನು ಘೋಷಿಸಲಾಗಿದೆ. ಉಕ್ರೇನ್ ಮೇಲಿನ ಆಕ್ರಮಣ ಹಾಗೂ ರಷ್ಯಾದ ಪೂರ್ವಭಾಗದಲ್ಲಿರುವ ರಷ್ಯಾ ಪರ ಸಂಘಟನೆಗಳಿಗೆ ಸರ್ಕಾರದ ಬೆಂಬಲವನ್ನು ಈ ನೀತಿಯ ಮೂಲಕ ಪುಟಿನ್ ಸಮರ್ಥಿಸಿಕೊಂಡಿದ್ದಾರೆ.
‘ರಷ್ಯಾದಿಂದ ದೂರ ಇರುವ ದೇಶಗಳಲ್ಲಿ ವಾಸವಿರುವ ರಷ್ಯಾ ಪರ ಇರುವ ಜನತೆ ಮತ್ತು ರಷ್ಯಾದ ಹಿತಾಸಕ್ತಿಗೂ ರಷ್ಯಾ ಸರ್ಕಾರವು ಬೆಂಬಲ-ರಕ್ಷಣೆ ಖಾತ್ರಿಪಡಿಸುತ್ತದೆ. ಅವರು ಅನುಸರಿಸುವ, ಬೆಂಬಲಿಸುವ ರಷ್ಯಾದ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸುತ್ತದೆ.