ಕೆಲವು ಶಕ್ತಿಗಳು ಭಾರತ ಮತ್ತು ಚೀನಾದ ನಡುವಿನ ಭಿನ್ನಾಭಿಪ್ರಾಯವನ್ನು ಉದ್ದೇಶಪೂರ್ವಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಭಾರತಕ್ಕೆ ರಶ್ಯದ ರಾಯಭಾರಿ ಡೆನಿಸ್ ಅಲಿಪೋವ್ ಹೇಳಿದ್ದಾರೆ.
ಅಮೆರಿಕ ನೇತೃತ್ವದ ಭಾರತ- ಪೆಸಿಫಿಕ್ ಉಪಕ್ರಮವನ್ನು ಟೀಕಿಸಿದ ಅವರು, ಇದು ನಿಯಂತ್ರಕ ನೀತಿಯ ಭಾಗವಾಗಿದೆ . ಆದರೆ ಕ್ವಾಡ್‌ನ ‘ವಿಭಜಕ ಹೇಳಿಕೆ’ಯನ್ನು ಅನುಮೋದಿಸಲು ನಿರಾಕರಿಸಿದ ಭಾರತದ ನಿಲುವು ಶ್ಲಾಘನೀಯ ಎಂದರು.
ಆರ್‌ಐಸಿ ಈ ಪ್ರದೇಶದಲ್ಲಿ ಪರಸ್ಪರ ತಿಳುವಳಿಕೆ, ನಂಬಿಕೆ ಮತ್ತು ಸ್ಥಿರತೆಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಇದು ಸದಸ್ಯ ದೇಶಗಳ ನಡುವೆ ಸಹಕಾರ ಮತ್ತು ಸಮನ್ವಯವನ್ನು ಹೆಚ್ಚಿಸಲು ಮತ್ತಷ್ಟು ಕೊಡುಗೆಯನ್ನು ನೀಡುತ್ತದೆ. ಇದು ಭಾರತ- ಚೀನಾ ನಡುವಿನ ರಚನಾತ್ಮಕ ಮಾತುಕತೆಗೆ ಉತ್ತೇಜನ ನೀಡುತ್ತದೆ ಎಂಬ ವಿಶ್ವಾಸ ಇರುವುದರಿಂದ ನಿಸ್ಸಂಶಯವಾಗಿ ರಶ್ಯಾಕ್ಕೆ ಇದು ಆದ್ಯತೆಯ ವಿಷಯವಾಗಿದೆ.
ಈ ವಲಯದಲ್ಲಿ ಪರಸ್ಪರ ತಿಳುವಳಿಕೆ, ವಿಶ್ವಾಸ ಮತ್ತು ಸ್ಥಿರತೆಯನ್ನು ವೃದ್ಧಿಸುವಲ್ಲಿ ಹಾಗೂ ಮೂವರೂ ಭಾಗವಾಗಿರುವ ಬ್ರಿಕ್ಸ್, ಶಾಂಘೈ ಸಹಕಾರ ಸಂಘಟನೆಯಂತಹ ಬಹುಪಕ್ಷೀಯ ಸಂಸ್ಥೆಗಳ ಕಾರ್ಯಸೂಚಿಯನ್ನು ಬೆಂಬಲಿಸುವಲ್ಲಿ ಆರ್‌ಸಿಐ ನಿರ್ಣಾಯಕವಾಗಿದೆ ಎಂದವರು ಹೇಳಿದ್ದಾರೆ.
ರಷ್ಯಾ-ಭಾರತ-ಚೀನಾ (ಆರ್‌ಐಸಿ) ತ್ರಿಪಕ್ಷೀಯ ಬಾಂಧವ್ಯವು ಮೂರೂ ದೇಶಗಳಲ್ಲಿ ಅಸಾಧಾರಣ ಸಹಕಾರ ಸಂಬಂಧದ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ಭಾರತ-ಚೀನಾ ನಡುವೆ ರಚನಾತ್ಮಕ ಸಂವಾದವನ್ನು ಉತ್ತೇಜಿಸಲು ಒತ್ತಾಸೆ ನೀಡುವ ಚೌಕಟ್ಟು ಆಗಬಹುದು. ಈ ತ್ರಿಪಕ್ಷಿಯ ಬಾಂಧವ್ಯದ ಅನುಸಂಧಾನವು ಇತರ ಕೆಲವು ಶಕ್ತಿಗಳ ಧೋರಣೆಗಿಂತ ವಿಭಿನ್ನವಾಗಿರಲಿದೆ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಲಿಪೋವ್ ಅಭಿಪ್ರಾಯಪಟ್ಟಿದ್ದಾರೆ.