ತೆಂಗಿನ ಮರ’ ಎಂದರೆ ಭಾರತೀಯರಿಗೆ ಪೂಜ್ಯ ಭಾವ. ತೆಂಗಿನಮರವನ್ನು ಕಲ್ಪವೃಕ್ಷ ಎಂತಲೂ ಕರೆಯುತ್ತಾರೆ. ಏಕೆಂದರೆ ತೆಂಗಿನಮರ ಕೊಡುವ ತೆಂಗಿನ ಕಾಯಿ, ಇದರ ಎಲೆ/ಗರಿ, ಕತ್ತ, ಕಾಂಡ ಎಲ್ಲ ಉಪಯೋಗಕಾರಿಯಾಗಿವೆ. ತೆಂಗಿನ ಮರದ ಪ್ರತಿಯೊಂದು ಭಾಗವು ಮನುಷ್ಯನಿಗೆ ಬಹುಪಯೋಗಿ.
ಭಾರತದಾದ್ಯಂತ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಒರಿಸ್ಸಾ, ಗೋವಾರಾಜ್ಯಗಳ ಕರಾವಳಿ ಪ್ರಾಂತಗಳಲ್ಲಿ ಹೆಚ್ಚಾಗಿ ಸಾಗುವಳಿ ಮಾಡುತ್ತಾರೆ. ಅಂಡಮಾನ್-ನಿಕೋಬಾರ್ ದ್ವೀಪಗಳ ಸಮುದ್ರ ತೀರ ಪ್ರಾಂತ್ಯದಲ್ಲೂ ತೆಂಗು ಬೆಳೆಯಲಾಗುತ್ತದೆ. ಅಸ್ಸಾಂ, ಗುಜರಾತ್, ಮಹಾರಾಷ್ಟ್ರ, ನಾಗಲ್ಯಾಂಡ್ ತ್ರಿಪುರ, ಪಶ್ಚಿಮ ಬಂಗಾಳ, ಲಕ್ಷದ್ವೀಪ, ಪಾಂಡಿಚೆರಿ ರಾಜ್ಯಗಳಲ್ಲಿಯೂ ಸಾಗುವಳಿ ನಡೆಯುತ್ತಿದೆ.
ಇನ್ನು ಕರ್ನಾಟಕದಲ್ಲಿ ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತೆಂಗನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
‘ಕಲ್ಪವೃಕ್ಷ’ ವೆನಿಸಿಕೊಂಡಿರುವ ತೆಂಗು ರಾಜ್ಯದ ಮುಖ್ಯ ವಾಣಿಜ್ಯ ಬೆಳೆಗಳಲ್ಲೊಂದು.
ಇದು ಆಹಾರ (ಎಣ್ಣೆ), ಒಣಕೊಬ್ಬರಿ, ಪಾನೀಯ ಮತ್ತು ಉರುವಲು ವಸ್ತುಗಳನ್ನು ಒದಗಿಸುವುದಲ್ಲದೇ ಹಲವಾರು ಕೈಗಾರಿಕೆಗಳಿಗೆ
ಕಚ್ಚಾ ಪದಾರ್ಥಗಳನ್ನು ಒದಗಿಸುವುದು. ಕೊಬ್ಬು ಮತ್ತು ಹಲವು ಜೀವಸತ್ವಗಳನ್ನು ಹೊಂದಿರುವುದರಿಂದ ಪಿಷ್ಟಯುಕ್ತ
ಆಹಾರ ಪದಾರ್ಥಗಳಲ್ಲಿಯ ಕೊರತೆಗಳನ್ನು ಸರಿದೂಗಿಸುತ್ತದೆ.
ನಾಟಿ ಮತ್ತು ಉತ್ತಮ ಸಸಿಗಳ ಆಯ್ಕೆ :
ಉತ್ತಮ ಗುಣಮಟ್ಟದ ಸಸಿಗಳನ್ನು ಬೆಳೆಸಲು ಕೆಳಗಿನ ವಿಧಾನಗಳನ್ನು ಅನುಸರಿಸಬೇಕು
ಅ) ಬೀಜದ ಕಾಯಿಗಳ ಆಯ್ಕೆ
೧. ಮಳೆಯಾಶ್ರಯದಲ್ಲಿ ಪ್ರತಿ ವರ್ಷವೂ ೮೦-೧೦೦ ಕಾಯಿ ಬಿಡುತ್ತಿರುವ ೨೫-೪೦ ವರ್ಷ
ವಯಸ್ಸಿನ ಆರೋಗ್ಯವಾದ ಮರಗಳಿಂದ ಗೋಲಾಕಾರದ ಮಧ್ಯಮ ಗಾತ್ರದ ಕಾಯಿಗಳನ್ನು ಬಿತ್ತನೆಗಾಗಿ ಆರಿಸಬೇಕು.
೨. ಕಡಿಮೆ ನೀರುಳ್ಳ ಸಂಪೂರ್ಣ ಬಲಿತ ಕಾಯಿಗಳನ್ನು ಆರಿಸಬೇಕು.
೩. ಪ್ರತಿ ತಾಯಿ ಮರವು ೧೨ ಗೊಂಚಲು ಮತ್ತು ೩೦-೪೦ ಗರಿಗಳನ್ನು ಹೊಂದಿರಬೇಕು.
೪. ಅಕ್ಟೋಬರ್ನಿಂದ ಮಾರ್ಚ್ ತಿಂಗಳವರೆಗೆ ಬರುವ ಕಾಯಿಗಳನ್ನು ಬಿತ್ತನೆಗೆ ಉಪಯೋಗಿಸಬೇಕು.
೫. ಆಯ್ದ ಕಾಯಿಗಳನ್ನು ೨ ತಿಂಗಳು ಕಾಲ ತೊಟ್ಟು ಮೇಲ್ಮುಖವಾಗಿರುವಂತೆ ಶೇಕರಿಸಿಡಬೇಕು.
ಆ) ಸಸಿಮಡಿ ತಯಾರಿಕೆ ಮತ್ತು ಕಾಯಿ ನೆಡುವಿಕೆ
೧. ೭.೫ ಮೀ. ಉದ್ದ x ೧.೫ ಮೀ. ಅಗಲದ ಅಳತೆಯ ಸಸಿಮಡಿಗಳನ್ನು ತಯಾರಿಸಿ. ೪೦ ಸೆಂ.ಮೀ. ಅಂತರದ ಸಾಲುಗಳಲ್ಲಿ, ೪೫ ಸೆಂ.ಮೀ. ಆಳದ ಕಾಲುವೆ ಮಾಡಿ ತೆಗೆದು ಮರಳನ್ನು ತುಂಬಬೇಕು.
೨. ಎರಡು ತಿಂಗಳು ಸಂಗ್ರಹಿಸಿಟ್ಟ ಬೀಜದ ಕಾಯಿಗಳನ್ನು ೩೦ ಸೆಂ.ಮೀ. ಅಂತರದಲ್ಲಿ ನೇರವಾಗಿ ಸಸಿಮಡಿಯಲ್ಲಿ ನಾಟಿ ಮಾಡಬೇಕು. ಕಾಯಿಗಳ ಮೇಲೆ ೫ ಸೆಂ.ಮೀ.
ಗಿಂತ ಹೆಚ್ಚು ಮರಳು ಇರಬಾರದು. ಕಾಯಿಗಳನ್ನು ಅಡ್ಡಲಾಗಿಯೂ ಸಹ
ನೆಡಬಹುದು.
೩. ನಾಟಿ ಮಾಡಿದ ಬೀಜದ ಕಾಯಿಗಳು ೩-೪ ತಿಂಗಳುಗಳಲ್ಲಿ ಮೊಳಕೆಯೊಡೆದು, ಸುಮಾರು ೧೨-೧೮ ತಿಂಗಳಲ್ಲಿ ನಾಟಿಗೆ ಸಿದ್ಧವಾಗುತ್ತವೆ. ೫ ತಿಂಗಳುಗಳ ನಂತರ ಮೊಳಕೆ ಬಂದ ಸಸಿಗಳನ್ನು ನಾಟಿಗೆ ಉಪಯೋಗಿಸಬಾರದು.
೪. ಹೆಚ್ಚು ಗರಿಗಳುಳ್ಳ (೫-೬), ದಪ್ಪಕಾಂಡ ಹೊಂದಿದ (೧೦ ಸೆಂ.ಮೀ. ಗಾತ್ರ), ದೃಢವಾಗಿರುವ, ತ್ವರಿತ ಬೆಳವಣಿಗೆ ಹೊಂದಿರುವ, ಹೆಚ್ಚು ಬೇರು ಹಾಗೂ ಎರಿಯ
ತುದಿ ಒಡೆದಿರುವ ಸಸಿಗಳನ್ನು ನಾಟಿ ಮಾಡಲು ಉಪಯೋಗಿಸಬೇಕು.
ತೆಂಗಿನ ಗರಿಷ್ಠ ಪರಿಣಾಮಕಾರಿ ಬೇರಿನ ವಲಯ ೨ ಮೀ. ನಷ್ಟು ಇರುತ್ತದೆ ಹಾಗೂ ಒಂದು ತೆಂಗಿನ ಮರವು ಒಟ್ಟು ಪ್ರದೇಶದ ಶೇ. ೧೨.೬ ರಿಂದ ಶೇ. ೧೯.೬ ರಷ್ಟು ಪ್ರದೇಶವನ್ನು ಮಾತ್ರ ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುತ್ತದೆ, ಉಳಿದ ಶೇ. ೮೦.೪ ರಿಂದ ಶೇ. ೮೭.೪ ಪ್ರದೇಶವನ್ನು ಬೇರೆ ಬೆಳೆಗಳನ್ನು ಬೆಳೆಯಲು ಉಪಯೋಗಿಸಿಕೊಳ್ಳಬಹುದಾಗಿದೆ .
ತೆಂಗಿನ ತೋಟದಲ್ಲಿ
ಅಂತರ/ಮಿಶ್ರ ಬೆಳೆಯ ಮಹತ್ವ
ತೆಂಗಿನ ಬೆಳೆಯ ಜೀವನ ಸರದಿಯನ್ನು, ಅದರ ಎತ್ತರ, ವಿಸ್ತಾರಕ್ಕನುಗುಣವಾಗಿ ಮೂರು
ವಿಧಗಳಾಗಿ ವಿಂಗಡಿಸಬಹುದು:
(ಅ) ನೆಟ್ಟ ಸಮಯದಿಂದ ೮ ವರುಷದವರೆಗಿನ ತೆಂಗು ಹೆಚ್ಚು ಆವರಿಸುವುದಿಲ್ಲ ಹಾಗೂ
ತೆಂಗಿನ ಬೆಳೆಯ ಬೇರಿನ ಬೆಳವಣಿಗೆ ಒಂದು ಮೀಟರ್ ವ್ಯಾಸದಲ್ಲಿ ಮಾತ್ರ
ಆವರಿಸಿರುತ್ತದೆ.
ಶೇಕಡಾ ೮೦ – ೯೦ ರಷ್ಟು ಸೂರ್ಯನ ಕಿರಣಗಳ ಲಭ್ಯತೆ.
(ಆ) ೮ ವರ್ಷದಿಂದ ೨೫ ವರ್ಷದವರೆಗಿನ ತೆಂಗಿನ ಮರವು ಹೆಚ್ಚಿನ ಎರಿಗಳನ್ನು
ಹೊಂದಿರುತ್ತದೆ, ಅದರ ಗಾತ್ರ ದೊಡ್ಡದಾಗಿರುತ್ತದೆ ಮತ್ತು ಗಿಡವು ಭೂಮಿಯನ್ನು ಹೆಚ್ಚಾಗಿ ಆವರಿಸಿರುತ್ತದೆ. ಈ ಅವಧಿಯಲ್ಲಿ
ಅಂತರ ಬೆಳೆಗಳನ್ನು ಬೆಳೆಯುವಾಗ,
ನೆರಳಿನಲ್ಲಿ ಬೆಳೆಯಬಲ್ಲ ಬೆಳೆಗಳನ್ನು ಮಾತ್ರ ಬೆಳೆಯಬಹುದು.
ಶೇಕಡಾ ೨೦ ರಷ್ಟು ಸೂರ್ಯನ ಕಿರಣಗಳ ಲಭ್ಯತೆ.
(ಇ) ೨೫ ವರುಷದ ನಂತರದ ತೆಂಗಿನ ಕಾಂಡ ಎತ್ತರವಾಗಿ ಬೆಳೆದಿರುತ್ತದೆ ಹಾಗೂ ಅಧ್ಯಯನದ ಪ್ರಕಾರ ಶೇ. ೭೩ ರಷ್ಟು ಬೇರುಗಳು ೧.೮ ಮೀಟರ್ ವ್ಯಾಸದಲ್ಲಿ ಕೇಂದ್ರೀಕೃತವಾಗಿರುತ್ತವೆ. ಇದರಿಂದ ಈ ಬೆಳೆಯನ್ನು ಏಕ ಬೆಳೆಯಾಗಿ ೭.೫ x ೭.೫ ಮೀಟರ್ ಅಂತರದಲ್ಲಿ ಬೆಳೆಯುವುದರಿಂದ, ಶೇ. ೨೫ ರಷ್ಟು ಭೂಮಿ ಮಾತ್ರ
ಉಪಯೋಗಿಸಲ್ಪಡುತ್ತದೆ. ಈ ಅವಧಿಯಲ್ಲಿ ವಿವಿಧ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಯಬಹುದು.
ಕೊಯ್ಲು ಮತ್ತು ಇಳುವರಿ :
ತಳಿಗೆ ಅನುಗುಣವಾಗಿ ನಾಟಿ ಮಾಡಿದ ೪-೭ ವರ್ಷಗಳಲ್ಲಿ ಗಿಡಗಳು ಕಾಯಿ ಬಿಡಲು ಪ್ರಾರಂಭಿಸುತ್ತವೆ. ಗಿಡ್ಡ ತಳಿಗಳು ೩-೪ ವರ್ಷಕ್ಕೆ ಫಲಕ್ಕೆ ಕೊಡುತ್ತವೆ. ಪ್ರತಿ ಮರದಿಂದಲೂ ವರ್ಷಕ್ಕೆ ಸರಾಸರಿ ಕಾಯಿಗಳ ಇಳುವರಿ ಈ ಕೆಳಗಿನಂತಿರುತ್ತದೆ.
• ಎತ್ತರ ತಳಿಗಳು – ೮೦-೧೦೦ ಕಾಯಿಗಳು
• ಗಿಡ್ಡ ತಳಿಗಳು – ೮೦ -೯೫ ಕಾಯಿಗಳು
• ಸಂಕರಣ ತಳಿಗಳು – ೧೦೦-೧೫೦ ಕಾಯಿಗಳು
ದೊರೆಯುತ್ತವೆ.
ತೆಂಗಿಗೆ ರೋಗ ಬಾಧೆ ಸಾಮಾನ್ಯ. ಕಾಯಿ ಪೀಚು ಪೀಚಾಗುವುದು, ಮಿಳ್ಳೆಗಳು ಉದುರಿ ಹೋಗುವುದು, ನುಸಿಪೀಡೆ, ರಸಸೋರುವಿಕೆ ಬಾಧೆ… ಹೀಗೆ ಹತ್ತು ಹಲವಾರು ಸಮಸ್ಯೆಗಳಿಂದ ತೆಂಗಿನ ಮರ ಬಳಲುತ್ತದೆ.
ತೆಂಗಿನ ಮರ ಚೆನ್ನಾಗಿ ಬೆಳೆಯಲು ಕಾಯಿ ಬಿಡುವ ಪ್ರತಿ ತೆಂಗಿನ ಮರಕ್ಕೆ ಕನಿಷ್ಠ 45 ಲೀಟರ್ ನೀರು ಉಣಿಸಬೇಕು. ಈ ಮರಕ್ಕೆ ವರ್ಷಕ್ಕೆ 100 ಕೆ.ಜಿ. ಹಸಿರೆಲೆ ಗೊಬ್ಬರ, 30 ಕೆ.ಜಿ. ತಿಪ್ಪೆಗೊಬ್ಬರ ಮತ್ತು 10 ಕೆ.ಜಿ. ಒಲೆಬೂದಿ ಹಾಕಬೇಕು.
ಒಂದು ತಿಂಗಳವರೆಗೆ ದೇಸೀ ಆಕಳ ಮಜ್ಜಿಗೆ ಸಂಗ್ರಹಿಸಿ, ಚೆನ್ನಾಗಿ ಹುಳಿ ಬಂದ ಎರಡು ಲೀಟರ್ ಮಜ್ಜಿಗೆಯನ್ನು 18 ಲೀಟರ್ಗೆ ನೀರಿಗೆ ಸೇರಿಸಿ ಬೆಳೆಗಳಿಗೆ ಸಿಂಪಡಿಸಬೇಕು.
ಮೊಸರನ್ನು ಮರದ ಬೇರಿನ ಸುತ್ತ ಪ್ರತಿದಿನ ಹಾಕಬೇಕು. ಸ್ವಲ್ಪ ತಿಂಗಳು ನಿತ್ಯ ಇದನ್ನು ಮಾಡುತ್ತಿದ್ದರೆ ತೆಂಗಿನ ಮಿಳ್ಳೆ ಉದುರುವುದು ಕಮ್ಮಿಯಾಗುತ್ತದೆ. ಹಸಿಮೆಣಸಿನಕಾಯಿ ಹಾಗೂ ಬೇವಿನ ಸೊಪ್ಪನ್ನು ಚೆನ್ನಾಗಿ ಅರೆದು 18 ಲೀಟರ್ ನೀರಿಗೆ ಒಂದು ಲೀಟರ್ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಕಿ ಸಿಂಪಡಿಸಿದರೆ ಕೀಟಬಾಧೆ ಬರುವುದಿಲ್ಲ.ಹುಳು, ನುಸಿ ನಿಯಂತ್ರಣಕ್ಕೆ ತೆಂಗಿನ ಮರದ ಸುಳಿಯ ಬಳಿ ಅರಿಶಿಣ, ಇಂಗು, ಬೆಳ್ಳುಳ್ಳಿ, ಶುಂಠಿಗಳನ್ನು ಕಟ್ಟಬಹುದು.
ತೇವಾಂಶ ಹೆಚ್ಚಾಗಿ ಅತಿ ಶೀತದಿಂದ ರಸ ಸೋರುವ ರೋಗ ಬರುತ್ತದೆ. ಅಂತಹ ಸಂದರ್ಭದಲ್ಲಿ 4 ಅಡಿ ಎತ್ತರದಲ್ಲಿ ದಪ್ಪ ಮೊಳೆಯಿಂದ ಎರಡೂ ಕಡೆ ರಂಧ್ರ ಮಾಡಬೇಕು. ರಸ ಸೋರಿಹೋದ ಮೇಲೆ ಬೆಂಕಿ ಹಚ್ಚಿದ ಶಾಖ ಕೊಡಬೇಕು. ಕಾಂಡಕ್ಕೆ ಸುಣ್ಣ ಬಳಿಯಬೇಕು. ಮಣ್ಣು, ಗೊಬ್ಬರ, ನೀರು ಸರಿಪಡಿಸಿ ಗುಣಪಡಿಸಬಹುದು. ಉಳಿಯಿಂದ ರಸ ಸೋರುವ ಜಾಗವನ್ನು ಚೌಕಾಕಾರವಾಗಿ ಕೆತ್ತಬೇಕು. ಅದಕ್ಕೆ ಎಕ್ಕದ ಸೊಪ್ಪು, ತುಂಬೆ ಸೊಪ್ಪು, ಅಂಬಳಿ ಸೊಪ್ಪು, ಸೇರಿಸಿ ಅರೆದು ರಸವನ್ನು ಹಚ್ಚಬೇಕು. ಹೀಗೆ ನಾಲ್ಕಾರು ಬಾರಿ ಹಚ್ಚಿದರೆ. ಕ್ರಮೇಣ ರೋಗ ವಾಸಿಯಾಗುತ್ತಾ ಬರುತ್ತದೆ.
ತೆಂಗಿನ ಮರಗಳ ಬುಡಭಾಗದಲ್ಲಿ ಕಾಂಡ ಸೋರುವ ಲಕ್ಷಣಗಳು ಕಂಡುಬರುತ್ತವೆ. ಬುಡದಿಂದ ಒಂದು ಮೀಟರ್ ಎತ್ತರದೊಳಗೆ ಕೆಂಪುಮಿಶ್ರಿತ ಕಂದುಬಣ್ಣದ ದ್ರವ ತೊಗಟೆಯ ಸೀಳುಗಳಿಂದ ಹೊರಬರುತ್ತದೆ. ಈ ರೋಗ ನಿಯಂತ್ರಿಸಲು 50 ಕೆ.ಜಿ. ಕೊಟ್ಟಿಗೆ ಗೊಬ್ಬರವನ್ನು ಪ್ರತಿ ತೆಂಗಿನ ಮರಕ್ಕೆ ವರ್ಷಕ್ಕೊಮ್ಮೆ ಸೇರಿಸುವ ಜೊತೆಗೆ 5 ಕೆ.ಜಿ. ಬೇವಿನ ಹಿಂಡಿ, 50 ಗ್ರಾಂ ಟ್ರೈಕೋಡರ್ಮ ಎಂಬ ಜೀವಾಣುವನ್ನು ತೆಂಗಿನಮರದ ಬುಡಕ್ಕೆ ಸೇರಿಸಬೇಕು. ರೋಗದ ಸೋಂಕು ಕಾಣಿಸಿಕೊಳ್ಳುವ ಮರಗಳನ್ನು ಗುರುತಿಸಿ, ತೊಗಟೆ ಸಹಿತ ರೋಗಕಾರಕ ಮಚ್ಚೆಗಳನ್ನು ಕೆತ್ತಿ ತೆಗೆಯಬೇಕು. ಕೆತ್ತಿದ ಭಾಗಕ್ಕೆ ಶೇ 10ರ ತಾಮ್ರದ ಆಕ್ಸಿ ಕ್ಲೋರೈಡ್ ಶಿಲೀಂಧ್ರನಾಶಕ ಲೇಪಿಸಿ, ಬೇರಿನ ಮೂಲಕ ಪ್ರತಿ ಮೂರು ತಿಂಗಳಿಗೊಮ್ಮೆ 5 ಮಿ.ಲೀ. ಟ್ರೈಕೋಮಾಫರ್ ಅನ್ನು 100 ಲೀಟರ್ ನೀರಿನಲ್ಲಿ ಮಿಶ್ರಣಮಾಡಿ ಕೊಡಬೇಕು.
1 ಕೆ.ಜಿ. ಕಡಲೆಕಾಯಿ ಹಿಂಡಿಯನ್ನು 4 ಲೀಟರ್ ನೀರಿನಲ್ಲಿ ಸ್ವಲ್ಪ ಹುಳಿ ಮಜ್ಜಿಗೆಯೊಂದಿಗೆ 5–6 ದಿನ ಹುದುಗಿಸಿ 2 ಲೀಟರ್ ಅಳತೆ ಡಬ್ಬದಲ್ಲಿ ಅರ್ಧದಷ್ಟು ತುಂಬಿಸಿ ನೆಲದಿಂದ 5 ಅಡಿ ಎತ್ತರದಲ್ಲಿ ಕಟ್ಟಿದರೆ ಸುಳಿ ಕೊರೆಯುವ ಹುಳುಗಳನ್ನು ನಾಶಪಡಿಸಬಹುದು.
ಅಣಬೆ ರೋಗ ತಡೆಯಲು ಬಸಿಗಾಲುವೆ ಸರಿಪಡಿಸಿ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದನ್ನು ನಿಯಂತ್ರಿಸಲು ಈ ಮೇಲೆ ತಿಳಿಸಿರುವ (ಕಾಂಡ ಸೋರುವ ಸಮಸ್ಯೆಗೆ ನೀಡಿರುವ ಪರಿಹಾರ) ಉಪಚಾರದೊಂದಿಗೆ ರೋಗಬಾಧಿತ ಮರಗಳ ಸುತ್ತ 2 ಮೀ. ಸುತ್ತಳತೆಯಲ್ಲಿ 1 ಮೀ. ಆಳ, 30 ಸೆ.ಮೀ. ಅಗಲದ ಕಾಲುವೆ ನಿರ್ಮಿಸಿ 4 ಕೆ.ಜಿ. ಗಂಧಕದ ಪುಡಿ ಸೇರಿಸಬೇಕು. ರೋಗಕ್ಕೆ ಬಲಿಯಾದ ಮರಗಳನ್ನು ಬುಡಸಮೇತ ತೆಗೆದು ಆ ಗುಂಡಿಗೆ 3 ಮಿ.ಲೀ. ಟ್ರೈಕೋಮಾಫರ್ ಅನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣಮಾಡಿ 10- 15ಲೀ. ಸುರಿಯುವುದರಿಂದ ಮಣ್ಣಿನಲ್ಲಿರುವ ರೋಗಾಣುಗಳನ್ನು ನಿರ್ಮೂಲನೆ ಮಾಡಬಹುದು.
ತೆಂಗಿನ ಮರಕ್ಕೆ ಸಾಮಾನ್ಯವಾಗಿ ಎಲ್ಲೆಡೆ ಕಾಡುವ ರೋಗ ಬುಡ ಸೋರುವಿಕೆ ಅಥವಾ ಕಾಂಡ ¸ ಸೋರುವಿಕೆ. ಈ ರೋಗಕ್ಕೆ ತುತ್ತಾದ ಮರಗಳಲ್ಲಿ ಫಸಲು ಕಡಿಮೆ ಆಗುತ್ತದೆ. ರೋಗ ಗರಿಷ್ಠ ಮಟ್ಟ ತಲುಪಿದಾಗ ಆ ಮರವೇ ಸತ್ತು ಹೋಗುತ್ತದೆ. ತೆಂಗು ಪ್ರಧಾನವಾಗಿ ಬೆಳೆಯುವ ಭಾಗಗಳ ರೈತರಿಗೆ ಬುಡ ಸೋರುವಿಕೆ ಇಂದಿಗೂ ತಲೆನೋವಾಗಿದೆ. ಈ ರೋಗ ಗುಣಪಡಿಸಲು ತೆಂಗಿನ ಮರಗಳಿಗೆ ತುಮಕೂರಿನ ಸಹಜ ಬೇಸಾಯ ವಿಜ್ಞಾನಿ ಡಾ|| ಮಂಜುನಾಥ ಹೇಳುವ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆಯು ಬಹಳ ಪರಿಣಾಮಕಾರಿ. ಇದೀಗ ರೈತರ ಗಮನವನ್ನು ಹೆಚ್ಚು ಸೆಳೆಯುತ್ತಿದೆ.
ಚಿಕಿತ್ಸೆಯ ಕ್ರಮ ಹೀಗಿದೆ ನೋಡಿ:
ಗಾಳಿ ಮತ್ತು ನೀರಿನ ಮೂಲಕ ಈ ಶಿಲೀಂಧ್ರ ರೋಗ ಹರಡುತ್ತದೆ. ಅದು ತಗುಲಿದ ಮರದ ರಸ ಸೋರುತ್ತಿರುವ ಭಾಗದ ತೊಗಟೆ ತೆಗೆಯಬೇಕು. ೧೦ ಗ್ರಾಂ ಇಂಗು, ಬೇವು ಮತ್ತು ಎಕ್ಕದ ಎಲೆ ತಲಾ ಒಂದು ಕೆ.ಜಿ, ಬೇವಿನ ಹಿಂಡಿ ೨೫ ಗ್ರಾಂ, ಸ್ವಲ್ಪ ಹೊಗೆಸೊಪ್ಪು, ಕರ್ಪೂರ, ಲಂಟಾನ ೨೫೦ ಗ್ರಾಂ ಮತ್ತು ೨೦ ಬೆಳ್ಳುಳ್ಳಿಯನ್ನು ಚೆನ್ನಾಗಿ
ಅರೆಯಬೇಕು. ಹಸುವಿನ ಸಗಣಿ, ಗಂಜಲ ಮಿಶ್ರಣ ಮಾಡಿಕೊಂಡು ರಸ ಸೋರುವ ಕಡೆ ಮೆತ್ತಬೇಕು. ಹೊಂಗೆ
ಎಣ್ಣೆಯಲ್ಲಿ ಅದ್ದಿದ ಕಾಟನ್ ಬಟ್ಟೆಯನ್ನು ಈ ಬಾಗಕ್ಕೆ ಸುತ್ತಬೇಕು. ಬಟ್ಟೆ ಒಣಗದಂತೆ ಮೂರು ದಿನಕ್ಕೆ ಒಮ್ಮೆ ಹೊಂಗೆ ಎಣ್ಣೆ ಸಿಂಪಡಿಸಬೇಕು. ಹೀಗೆ ಸರಾಸರಿ ಒಂದೂವರೆ ತಿಂಗಳು ಮಾಡುವುದರಿಂದ ರೋಗ ವಾಸಿ ಆಗುತ್ತದೆ’ ಎನ್ನುತ್ತಾರೆ ಡಾ|| ಮಂಜುನಾಥ.