ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ಯೋಜನೆಯ ರಾಯಭಾರಿಯಾಗಿ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ನೇಮಿಸಲಾಗಿದೆ. ಈ ಬಗ್ಗೆ ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರು ತಿಳಿಸಿದ್ದಾರೆ.
ಈ ಕುರಿತು ಕಿಚ್ಚ ಸುದೀಪ್ ಅವರಿಗೆ ಪತ್ರ ಬರೆದಿರುವ ಪ್ರಭು ಚವ್ಹಾಣ್, ತಾವು ಈ ಸತ್ಕಾರ್ಯದಲ್ಲಿ ಭಾಗಿಯಾಗಿ ಗೋ ಸಂಪತ್ತಿನ ಸಂರಕ್ಷಣೆಗೆ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಕೈ ಜೋಡಿಸಿ, ಗೋಮಾತಾ ರಕ್ಷಣೆಯಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಶು ಸಂಗೋಪನೆ ಇಲಾಖೆಯು ಜಾನುವಾರುಗಳ ರಕ್ಷಣೆಗಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಲಾಗಿದೆ. ಹೈನುಗಾರಿಕೆಗೆ ಉತ್ತೇಜನ, ಜಾನುವಾರುಗಳ ಸಂರಕ್ಷಣೆ, ಪಾಲನೆ, ಪೋಷಣೆ ಮಾಡುತ್ತಿರುವ ಸರ್ಕಾರದೊಂದಿಗೆ ಕೈ ಜೋಡಿಸಿ, ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಲು ತಮ್ಮನ್ನು ಪುಣ್ಯಕೋಟಿ ರಾಯಭಾರಿಯಾಗಿ ನೇಮಿಸಲಾಗಿದೆ. ತಮ್ಮ ಜನ್ಮದಿನದ ಈ ಶುಭ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದು ಪತ್ರ ಬರೆದಿದ್ದಾರೆ.
ಸುದೀಪ್ ಅವರನ್ನು ಪಶು ಸಂಗೋಪನೆ ಇಲಾಖೆಯ ಪುಣ್ಯಕೋಟಿ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಸುದೀಪ್ ಅವರು ಯಾವುದೇ ಸಂಭಾವನೆ ಇಲ್ಲದೆ ಈ ಕೆಲಸವನ್ನು ನಿರ್ವಹಿಸುವುದಾಗಿ ಒಪ್ಪಿಕೊಂಡಿದ್ದಾರೆ. ಎಂದು ಪ್ರಭು ಚವ್ಹಾಣ್ ಮಾಹಿತಿ ಹಂಚಿಕೊಂಡಿದ್ದಾರೆ.