ಅಣ್ವಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದದ ಕುರಿತು ೪ ವಾರಗಳ ಸಮಾಲೋಚನೆಯ ಬಳಿಕ ವಿಶ್ವಸಂಸ್ಥೆಯು ಪರಮಾಣು ನಿಶ್ಯಸ್ತ್ರೀಕರಣದ ಜಂಟಿ ಘೋಷಣೆಯನ್ನು ಅಂಗೀಕರಿಸುವ ಪ್ರಕ್ರಿಯೆಗೆ ರಶ್ಯ ತಡೆಯೊಡ್ಡಿದೆ. ಘೋಷಣೆಯಲ್ಲಿ ಕೆಲವೊಂದು ರಾಜಕೀಯ ಅಂಶಗಳಿವೆ ಎಂದು ರಶ್ಯ ಪ್ರತಿಪಾದಿಸಿದೆ.
ಪರಮಾಣು ಹರಡುವಿಕೆಯನ್ನು ತಡೆಯಲು, ಸಂಪೂರ್ಣ ನಿಶ್ಯಸ್ತ್ರೀಕರಣವನ್ನು ಉತ್ತೇಜಿಸಲು ಮತ್ತು ಪರಮಾಣು ಶಕ್ತಿಯ ಶಾಂತಿಯುತ ಬಳಕೆಯಲ್ಲಿ ಸಹಕಾರವನ್ನು ಉತ್ತೇಜಿಸುವ ಗುರಿ ಹೊಂದಿರುವ ಪರಮಾಣು ಪ್ರಸರಣ ನಿರೋಧ ಒಪ್ಪಂದಕ್ಕೆ ಸಹಿಹಾಕಿರುವ 191 ದೇಶಗಳು ಪ್ರತೀ 5 ವರ್ಷಕ್ಕೊಮ್ಮೆ ಒಪ್ಪಂದದ ಅಂಶವನ್ನು ಪರಿಶೀಲನೆ ನಡೆಸುತ್ತವೆ. ಈ ನಿಟ್ಟಿನಲ್ಲಿ ನ್ಯೂಯಾರ್ಕ್ ನ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಆಗಸ್ಟ್ 1 ರಿಂದ ಸಭೆ ಸೇರಿರುವ191ದೇಶಗಳ ಪ್ರತಿನಿಧಿಗಳು ಶುಕ್ರವಾರದ ಅಂತಿಮ ಅಧಿವೇಶನದಲ್ಲಿ ಘೋಷಣೆ ಅಂಗೀಕರಿಸುವ ನಿರೀಕ್ಷೆಯಿತ್ತು.
ಆದರೆ ಘೋಷಣೆಯ ಅಂತಿಮ ಕರಡು ಪಠ್ಯದ ಬಗ್ಗೆ ರಶ್ಯದ ಪ್ರತಿನಿಧಿ ಇಗೋರ್ ವಿಶ್ನೆವೆಟ್ಸ್ಕಿ ಆಕ್ಷೇಪಿಸಿದರು. 30 ಕ್ಕೂ ಹೆಚ್ಚು ಪುಟಗಳ ಈ ಘೋಷಣೆ ಸಮತೋಲನ ಹೊಂದಿಲ್ಲ. ಸ್ಪಷ್ಟವಾದ ರಾಜಕೀಯ ಸ್ವರೂಪದ ಕೆಲವು ಪ್ಯಾರಾಗಳ ಕುರಿತು ನಮ್ಮ ನಿಯೋಗವು ಒಂದು ಪ್ರಮುಖ ಆಕ್ಷೇಪವನ್ನು ಹೊಂದಿದೆ . ರಶ್ಯ ಮಾತ್ರವಲ್ಲ, ಇತರ ಹಲವು ದೇಶಗಳೂ ಘೋಷಣೆಯನ್ನು ವಿರೋಧಿಸಿವೆ ಎಂದವರು ಹೇಳಿದರು.
ಮೂಲಗಳ ಪ್ರಕಾರ, ಉಕ್ರೇನ್ನ ಝಪೊರಿಝಿಯಾ ಪರಮಾಣು ಸ್ಥಾವರಕ್ಕೆ ಸಂಬಂಧಿಸಿದ(ಈಗ ರಶ್ಯದ ಸೇನೆಯ ವಶದಲ್ಲಿದೆ) ವಾಕ್ಯಗಳ ಕುರಿತು ರಶ್ಯ ಆಕ್ಷೇಪ ಎತ್ತಿದೆ. ಝಪೊರಿಝಿಯಾ ಸೇರಿದಂತೆ ಉಕ್ರೇನ್ನ ಇಂಧನ ಸ್ಥಾವರಗಳ ಸುತ್ತಮುತ್ತ ನಡೆಯುತ್ತಿರುವ ಸೇನಾ ಚಟುವಟಿಕೆ ಅತ್ಯಂತ ಕಳವಳಕಾರಿಯಾಗಿದೆ ಮತ್ತು ಈ ಸ್ಥಳಗಳ ಮೇಲಿನ ನಿಯಂತ್ರಣವನ್ನು ಉಕ್ರೇನ್ ಕಳೆದುಕೊಂಡಿರುವುದು ಸುರಕ್ಷತೆ ವಿಷಯದಲ್ಲಿ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಈ ವಾಕ್ಯದಲ್ಲಿ ಉಲ್ಲೇಖಿಸಲಾಗಿದೆ.
ʼಅಂತಿಮವಾಗಿ, ಸಮಾವೇಶವು ಒಪ್ಪಂದವನ್ನು ಸಾಧಿಸುವ ಸ್ಥಿತಿಯಲ್ಲಿ ಇಲ್ಲ’ ಎಂದು ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಅರ್ಜೆಂಟೀನಾದ ಗುಸ್ತಾವೊ ಝವಿನೆನ್ ಹೇಳಿದರು. ೨೦೧೫ರ ಪರಿಶೀಲನಾ ಸಮಾವೇಶದಲ್ಲಿಯೂ ಕೆಲವು ವಸ್ತುನಿಷ್ಟ ವಿಷಯಗಳ ಬಗ್ಗೆ ಒಪ್ಪಂದಕ್ಕೆ ಬರಲಾಗಿಲ್ಲ. ಇದರ ಹೊರತಾಗಿ, ಇರಾನ್ನ ಪರಮಾಣು ಕಾರ್ಯಕ್ರಮ, ಉತ್ತರ ಕೊರಿಯಾದ ಪರಮಾಣು ಪರೀಕ್ಷೆ ಸೇರಿದಂತೆ ಹಲವು ಜ್ವಲಂತ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಈ ವರ್ಷದ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ʼಜಗತ್ತು ಶೀತಲ ಯುದ್ಧದ ಉತ್ತುಂಗದ ಬಳಿಕ ದೂರವಾಗಿದ್ದ ಪರಮಾಣು ಅಪಾಯದ ಅಂಚಿನಲ್ಲಿದೆ. ಮನುಕುಲವು ಕೇವಲ ಒಂದು ತಪ್ಪು ತಿಳುವಳಿಕೆ, ತಪ್ಪು ಲೆಕ್ಕಾಚಾರ ಪರಮಾಣು ವಿನಾಶಕ್ಕೆ ಕಾರಣವಾಗುವ ಸ್ಥಿತಿಯಲ್ಲಿದೆ’ ಎಂದು ಎಚ್ಚರಿಸಿದರು.