ಸ್ತ್ರೀ ಸಾಮರ್ಥ್ಯ ಯೋಜನೆಯಡಿ ರಾಜ್ಯದ 33 ಸಾವಿರ ಸ್ತ್ರೀಶಕ್ತಿ ಸಂಘಗಳಿಗೆ ಪ್ರತಿ ಹಳ್ಳಿಯಲ್ಲಿಯೇ ಒಂದು ಸಂಘಕ್ಕೆ 1.5 ಲಕ್ಷ ರೂ. ಸಾಲ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಗುರುವಾರ ಇಲ್ಲಿನ ಬಿ.ಟಿ.ಪಾಟೀಲ ಮೈದಾನದಲ್ಲಿ ಏರ್ಪಡಿಸಿದ್ದ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಾಸಕ ಅರುಣಕುಮಾರ ಪೂಜಾರ 44ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ತ್ರೀಶಕ್ತಿ ಸಂಘಗಳ ಬಲವರ್ಧನೆ, ಸ್ತ್ರೀಯರ ಆರ್ಥಿಕ ಸ್ವಾವಲಂಬನೆ ಮಾಡುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿನ ಭೂರಹಿತ ಕೃಷಿ ಕಾರ್ಮಿಕ ಮಕ್ಕಳಿಗೂ ರೈತ ನಿಧಿಯೋಜನೆಯಂತೆ ವಿದ್ಯಾನಿಧಿ ಜಾರಿಗೆ ತರಲಾಗುವುದು. ಕುಶಲ ಕಾರ್ಮಿಕರಿಗೆ 50 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಕುರಿಗಾರರಿಗೆ ವಿಶೇಷ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಈ ಯೋಜನೆಯಡಿ ಪ್ರತಿ ಸಂಘಕ್ಕೆ 20 ಕುರಿ, 1 ಟಗರು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಜಗಜೀವನ್ ರಾಮ್ ಅವರ ಹೆಸರಿನಲ್ಲಿ ಯುವಕರಿಗೆ ಉದ್ಯೋಗ ಕಲ್ಪಿಸುವ ಚಿಂತನೆ ಹಾಗೂ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯುವಕರ ಸ್ವಾವಲಂಬನೆ ಜೀವನಕ್ಕಾಗಿ 10 ಲಕ್ಷ ರೂ. ವರೆಗೆ ಸಹಾಯಧನ ನೀಡುವ ಯೋಜನೆಯಿದೆ. ರಾಜ್ಯದಲ್ಲಿ 8 ಸಾವಿರ ಶಾಲೆಗಳ ಮತ್ತು 3 ಸಾವಿರ ಅಂಗನವಾಡಿ ಕೊಠಡಿಗಳನ್ನು ನಿರ್ಮಿಸುವ ಯೋಜನೆಯ ಗುರಿ ಹೊಂದಲಾಗಿದೆ. ರಾಜ್ಯದ ಪ್ರತಿಯೊಂದು ಮನೆಗೂ ಒಂದಿಲ್ಲೊಂದು ರೀತಿಯ ಸರ್ಕಾರದ ಸೌಲಭ್ಯಗಳನ್ನು ನೀಡುವುದರ ಮೂಲಕ ಅಭಿವೃದ್ಧಿಯ ಸಾಧನೆಗಳನ್ನು ಮಾಡಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತ್ತೂಮ್ಮೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲಿದೆ. ಉತ್ತರ ಕರ್ನಾಟಕದ ಹೆಬ್ಟಾಗಿಲೆಂದೇ ಹೆಸರಾಗಿರುವ ರಾಣಿಬೆನ್ನೂರಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ದೊಡ್ಡದಾದ ಹೆಬ್ಟಾಗಿಲು ನಿರ್ಮಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಮಕೃಷ್ಣ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್, ಶ್ರೀ ಓಂಕಾರೇಶ್ವರ ಮಹಾಸ್ವಾಮೀಜಿ, ಶ್ರೀ ವೀರಭದ್ರ ಶ್ರೀ, ಮಲ್ಲಿಕಾರ್ಜುನ ಶ್ರೀ, ಪಶುಪತಿ ಶ್ರೀ, ಶಾಸಕ ಅರುಣಕುಮಾರ ಪೂಜಾರ, ಸಂಸದ ಜಿ.ಎಂ.ಸಿದ್ದೇಶ್ವರ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ವಿರೂಪಾಕ್ಷಪ್ಪ ಬಳ್ಳಾರಿ, ಯು.ಬಿ. ಬಣಕಾರ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.