ವಿಶ್ವ ಯುವ ಕೌಶಲ್ಯ ದಿನಾಚರಣೆ ಅಂಗವಾಗಿ ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಲ್ಲಿರುವ ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ವತಿಯಿಂದ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಕು.ಹಂಸಿಣಿ ಎನ್ ಇವರು ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ವಿಜೇತರಾಗಿರುತ್ತಾರೆ.
ಇವರಿಗೆ ‘ಕೌಶಲ್ಯ ಸ್ಪೂರ್ತಿ’ ಶೀರ್ಷಿಕೆ ಅಡಿಯಲ್ಲಿ ‘ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ’ (ಡಿಸ್ಟ್ರಿಕ್ಟ್ ಕಲೆಕ್ಟರ್ ಶ್ಯಾಡೊಯಿಂಗ್) ಕಾರ್ಯಕ್ರಮವನ್ನು ಆ.25 ರಂದು ಏರ್ಪಡಿಸಲಾಗಿದ್ದು ಕು.ಹಂಸಿಣಿ ಎನ್ ಇವರು ಜಿಲ್ಲಾಧಿಕಾರಿಗಳೊಂದಿಗೆ ಅವರ ದಿನದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ, ಅವರ ಅಧ್ಯಕ್ಷತೆಯಲ್ಲಿ ನಡೆದ ಹಲವು ಸಭೆಗಳಲ್ಲಿ ಪಾಲ್ಗೊಂಡು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಗಮನಿಸಿರುತ್ತಾರೆ.
ಈ ಕುರಿತು ಕು.ಹಂಸಿಣಿ ಎನ್ ಪ್ರತಿಕ್ರಿಯೆ ನೀಡಿ, ಈ ಕಾರ್ಯಕ್ರಮದಿಂದಾಗಿ ಅನೇಕ ಹೊಸ ವಿಷಯಗಳನ್ನು ಕಲಿಯಲು ಅವಕಾಶ ದೊರೆಯಿತು. ಅಲ್ಲದೇ ಯಾವುದೇ ಕಾರ್ಯದಲ್ಲಿ ಯಶಸ್ವಿಯಾಗಲು ಕೌಶಲ್ಯ ಬಹಳ ಮುಖ್ಯ ಎಂದು ತಿಳಿಯಿತು. ಈ ಅವಕಾಶ ಕಲ್ಪಿಸಿಕೊಟ್ಟ ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮಕ್ಕೆ ಧನ್ಯವಾದ ತಿಳಿಸುತ್ತೇನೆ. ಇಂದು ನನ್ನ ಪಾಲಿನ ಸುವರ್ಣ ದಿನ. ಜಿಲ್ಲಾಧಿಕಾರಿಗಳ ದಿನಚರಿ ಹೇಗಿರುತ್ತದೆ ಎಂಬುದನ್ನು ಹತ್ತಿರದಿಂದ ನೋಡಲು ಸಾಧ್ಯವಾಯಿತು. ಅವರ ಕೆಲಸದ ಒತ್ತಡ ಎಷ್ಟಿರುತ್ತದೆ ಎಂದು ಹತ್ತಿರದಿಂದ ನೋಡಿದ ಮೇಲೆ ಅರಿವಾಯಿತು ಎಂದ ಅವರು ನಾನೂ ಐಎಎಸ್ ಅಧಿಕಾರಿ ಆಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸುರೇಶ್.ಹೆಚ್.ಎಂ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆರ್ ಇವರಿಗೆ ವಂದನೆಗಳನ್ನು ಸಲ್ಲಿಸಿದರು.