ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಈಬಾರಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ
ಡಾ. ಸೆಲ್ವ ಮಣಿ, ಎಸ್ ಪಿ ಡಾ. ಲಕ್ಷ್ಮೀ ಪ್ರಸಾದ್ ಹಾಗೂ ಡಿ ವೈ ಎಸ್ ಪಿ ಬಾಲರಾಜ್ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಗಣಪತಿ ಮಂಡಳಿಯವರ ಜೊತೆ ಗಣಪತಿ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
2018-19ರ ವೇಳೆಯಲ್ಲಿ ಗಣಪತಿ ಕೂರಿಸಿದ ರೀತಿಯಲ್ಲಿಯೇ ಅವಕಾಶ ನೀಡಲಾಗುತ್ತದೆ. ಆದರೆ, ನಿಗದಿತ ವಿಸರ್ಜನೆ ಮೆರವಣಿಗೆಯ ಮಾರ್ಗ ಮೊದಲೇ ನೀಡಬೇಕು. ಕೊನೆ ಗಳಿಗೆಯಲ್ಲಿ ಮಾರ್ಗ ಬದಲಾಯಿಸಬಾರದು ಎಂದು ಡಾ. ಬಿ.ಎಂ. ಲಕ್ಷ್ಮೀ ಪ್ರಸಾದ್ ಅವರು ಹೇಳಿದ್ದಾರೆ.
ಗಣಪತಿ ಸಮಿತಿಯವರು ಹಬ್ಬದ ಬಗ್ಗೆ ಮಾಹಿತಿ ಕೊಟ್ಟಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ ಇದುವರೆಗೂ ಗಣಪತಿಯ ಎತ್ತರದ ಪ್ರಶ್ನೆ ಬಂದಿಲ್ಲ. ಆದರೂ, ವಿದ್ಯುತ್ ತಂತಿಗೆ ತಾಗದಂತೆ ಎಚ್ಚರ ವಹಿಸಬೇಕು ಎಂದು ಸಹ ಸೂಚಿಸಿದರು. ಸ್ಥಳೀಯ ಅಧಿಕಾರಿಗಳು ತಮ್ಮೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ. ಮೈಕ್ ಗೆ ಸುಪ್ರೀಂಕೋರ್ಟ್ ನಿಯಮ ಪಾಲಿಸಬೇಕಿದೆ. ಆದ್ದರಿಂದ ಡಿಜೆ ಹೊರತುಪಡಿಸಿ, ಗಣಪತಿ ತೋರಿಸುವ ಹಾಗೂ ವಿಸರ್ಜಿಸುವ ಬಗ್ಗೆ ಇಲಾಖೆಯಿಂದ ಯಾವುದೇ ನಿರ್ಬಂಧವಿಲ್ಲ ಎಂದರು.
2019ರಲ್ಲಿ ಡಿಜೆಗೆ ಅವಕಾಶವಿತ್ತು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಹೆಚ್ಚು ಶಬ್ದಕ್ಕೆ ನಿಬಂಧಗಳಿವೆ. ಆದರೆ, ಸರ್ಕಾರ ಡಿಜೆ ಅಥವಾ ಸೌಂಡ್ ಸಿಸ್ಟಮ್ ಗೆ ಅವಕಾಶ ಮಾಡಿಕೊಟ್ಟರೆ ಸ್ಥಳೀಯವಾಗಿಯೂ ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವ ಮಣಿ ಅವರು ತಿಳಿಸಿದ್ದಾರೆ.
ಮೆಸ್ಕಾಂ, ಅಗ್ನಿಶಾಮಕ ದಳ, ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಸಿಂಗಲ್ ವಿಂಡೋದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅವಕಾಶವಿದೆ. ಮೆರವಣಿಗೆ ಹೋಗುವ ದಾರಿಗೆ ಸಿಸಿಟಿವಿ ಕ್ಯಾಮೆರಾ ಗಳನ್ನು ಅಳವಡಿಸಲಾಗುತ್ತದೆ. ಪೊಲೀಸ್ ಬಂದೋಬಸ್ತ್ ನೀಡಲಾಗುತ್ತದೆ. ಆದರೆ, ವಿಸರ್ಜನೆಯ ದಾರಿ ಸರಿಯಾಗಿ ತಿಳಿಸಬೇಕು. ಬದಲಾವಣೆ ಮಾಡಬಾರದು ಎಂದು ಕೂಡ ಸೂಚಿಸಿದರು.