ಭಾರತವು ಹಳ್ಳಿಗಳಿಂದ ಕೂಡಿದ ದೇಶವಾಗಿದ್ದು, ಇಲ್ಲಿಯ ಬಹುಪಾಲು ಜನರು ತಮ್ಮ ಜೀವನೋಪಾಯಕ್ಕೆ ಕೃಷಿ ಮತ್ತು ಕೂಲಿಯನ್ನೆ ನಂಬಿ ಬದುಕು ನಡೆಸುತ್ತಿದ್ದಾರೆ. ಭಾರತ ಸರ್ಕಾರವು ಗ್ರಾಮೀಣ ಭಾಗದ ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಈ ಯೋಜನೆಗಳ ಲಾಭ ಪಡೆದು ಇಂದು ಗ್ರಾಮೀಣ ಭಾಗದಲ್ಲಿ ಹಲವಾರು ಕಾಮಗಾರಿಗಳು ಯಶಸ್ವಿಯಾಗಿವೆ.
ಹೀಗೆಯೆ ಮಹಾತ್ಮ ಗಾಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಕೂಲ ಪಡೆದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಖಂಡಿಕಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕುಗ್ವೆ ಗ್ರಾಮದ ಜನರು ತಮ್ಮ ಊರಿನಲ್ಲಿ ಲಭ್ಯವಿರುವ ಸರ್ಕಾರಿ ಖಾಲಿ ಜಾಗದಲ್ಲಿ ಕೆರೆಯನ್ನು ನಿರ್ಮಿಸಿದ್ದಾರೆ.
ಕುಗ್ವೆ ಗ್ರಾಮದ ಹೊಸ ಕೆರೆ ಕಾಮಗಾರಿಯ ವಿಶೇಷವೆಂದರೆ ಕೆರೆ ನಿರ್ಮಾಣದಲ್ಲಿ ಗ್ರಾಮದ ಮಹಿಳೆಯರೇ ಹೆಚ್ಚಾಗಿ ಕಾರ್ಯ ನಿರ್ವಹಿಸಿರುವುದು.
ಖಂಡಿಕಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಗ್ವೆ ಗ್ರಾಮವು ಸಾಗರ ಪಟ್ಟಣ ಪ್ರದೇಶಕ್ಕೆ ಹೊಂದಿಕೊಂಡಂತೆ ಇದೆ. ಗ್ರಾಮದಲ್ಲಿ 189 ಕುಟುಂಬಗಳು ವಾಸವಾಗಿದ್ದು ಇಲ್ಲಿನ ಬಹುಪಾಲು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ.
ಕಾಮಗಾರಿಯ ಅನುಷ್ಠಾನ:
ಕುಗ್ವೆ ಗ್ರಾಮದಲ್ಲಿನ ನೂರಾರು ಮಹಿಳಾ ಕೂಲಿ ಕಾರ್ಮಿಕರು ಉದ್ಯೋಗ ನೀಡುವಂತೆ ಖಂಡಿಕಾ ಗ್ರಾಮ ಪಂಚಾಯ್ತಿಗೆ ಅರ್ಜಿ ಸಲ್ಲಿಸಿದಾಗ, ಇದರ ಬಗ್ಗೆ ಗಮನ ಹರಿಸಿದ ಗ್ರಾಮ ಪಂಚಾಯ್ತಿಯು, ಗ್ರಾಮದಲ್ಲಿನ 150 ರಿಂದ 180 ಜನರಿಗೆ ಏಕ ಕಾಲದಲ್ಲಿ ಕೂಲಿ ಕೆಲಸ ನೀಡಲು ಕುಗ್ವೆ ಗ್ರಾಮದ ಸರ್ವೆ ನಂ. 22 ರಲ್ಲಿನ 3 ಎಕರೆ ಸರ್ಕಾರಿ ಖಾಲಿ ಜಾಗದಲ್ಲಿ ಕೆರೆ ನಿರ್ಮಿಸಲು ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆಯಿತು. ನಂತರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮಾರ್ಗಸೂಚಿಯನ್ವಯ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಯಿತು.
ಇಲ್ಲಿಯವರೆಗೆ ಖಂಡಿಕಾ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಇರುವ ಕೆರೆಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಕೇವಲ ಹೂಳೆತ್ತುವ ಕಾಮಗಾರಿ ಮಾತ್ರ ಅನುಷ್ಠಾನಗೊಳ್ಳುತ್ತಿತ್ತು, ಆದರೆ ಹೊಸ ಪ್ರಯೋಗವೆಂಬಂತೆ ಹೊಸದಾಗಿ ಕೆರೆ ನಿರ್ಮಿಸಲು ಮುಂದಾದ ಗ್ರಾಮ ಪಂಚಾಯತ್ ಆಡಳಿತ, ಗ್ರಾ. ಪ. ಸದಸ್ಯರು, ಪಿ.ಡಿ.ಒ. ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನೂತನವಾಗಿ ನಿರ್ಮಾಣವಾಗುವ ಕೆರೆಯ ಒಳ ಮತ್ತು ಹೊರ ಹರಿವುಗಳ ಬಗ್ಗೆ ಪೂರ್ಣ ಪರಿಶೀಲನೆ ನಡೆಸಿ ರೈತರಿಗೆ ಮತ್ತು ಸಾರ್ವಜನಿಕರಿಗರಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವ ಪ್ರದೇಶದಲ್ಲಿ ಕೆರೆ ನಿರ್ಮಿಸಲು ನಿರ್ಧರಿಸಿತು.
ಮಹಿಳೆಯರಿಂದಲೇ ಕೆರೆ ನಿರ್ಮಾಣ:
ಅಂದಾಜು ಮೊತ್ತ ರೂ.10 ಲಕ್ಷಗಳಲ್ಲಿ ಮಹಿಳೆಯರೇ ಮುಂದಾಳತ್ವ ವಹಿಸಿ ಕರೆ ನಿರ್ಮಿಸಿರುವುದ ಈ ಕೆರೆ ವಿಶೇಷ. ಒಟ್ಟು 146 ಜನ ಕೂಲಿ ಕಾರ್ಮಿಕರಲ್ಲಿ 134 ಜನ ಮಹಿಳೆಯರೇ ಭಾಗವಹಿಸಿದ್ದಾರೆ. ಕೆರೆ ನಿರ್ಮಾಣ ಕಾಮಗಾರಿಯಲ್ಲಿ ಒಟ್ಟು 2997 ಮಾನವ ದಿನಗಳು ಸೃಜನೆಯಾಗಿದ್ದು ನಿಗದಿತ ಸಮಯದೊಳಗೆ ಕೂಲಿ ಪಾವತಿಯಾಗಿದೆ. ಸದರಿ ಕಾಮಗಾರಿಯಲ್ಲಿ ಒಟ್ಟು 8 ಜನ ಮಹಿಳಾ ಮೇಟ್‍ಗಳು ಕೆಲಸ ನಿರ್ವಹಿಸಿದ್ದು, ಮೇಟ್‍ಗಳು ಗ್ರಾಮದ ಮಹಿಳೆಯರಿಗೆ ನರೇಗಾ ಯೋಜನೆಯಡಿ ದೊರೆಯುವ ಕೂಲಿ ಹಾಗೂ ಅವರ ಕೆಲಸದ ಕುರಿತು ಸರಿಯಾದ ಮಾಹಿತಿ ನೀಡಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.
ಕಾಮಗಾರಿಯ ಉಪಯೋಗ:
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಹೊಸ ಕೆರೆ ಕಾಮಗಾರಿಯಿಂದಾಗಿ ಕುಗ್ವೆ ಗ್ರಾಮದ ಮಹಿಳಾ ಕೂಲಿ ಕಾರ್ಮಿಕರಿಗೆ ಉದ್ಯೋಗದ ಜೊತೆಗೆ, ಕೆರೆಯ ಸುತ್ತ ಮುತ್ತಲಿನ ಕೊಳವೆ ಬಾವಿ ಹಾಗೂ ಸಾರ್ವಜನಿಕ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದಾಗಿ ರೈತರಿಗೆ ಬೇಸಿಗೆಯಲ್ಲೂ ಭತ್ತ ಬೆಳೆಯಲು ಅನೂಕೂಲವಾಗಿದೆ. ಇದರ ಜೊತೆಗೆ ಪ್ರಾಣಿ ಪಕ್ಷಿಗಳು ಹಾಗೂ ಗ್ರಾಮದ ಸುಮಾರು 50 ಕುಟುಂಬಗಳ ಜಾನುವಾರುಗಳಿಗೂ ಅನುಕೂಲವಾಗಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಹೊಸ ಕೆರೆ ನಿರ್ಮಾಣದಲ್ಲಿ ನಾವುಗಳು ಶ್ರಮವಹಿಸಿ ಭಾಗವಹಿಸಿದ್ದೆವು, ಜೊತೆಗೆ ಗ್ರಾಮದ ಮಹಿಳೆಯರಿಂದಲೇ ಕೆರೆ ನಿರ್ಮಾಣವಾಗಿರುವುದು ಸಂತಸದ ವಿಷಯವಾಗಿದೆ ಎಂದು ಗ್ರಾ. ಪಂ. ಸದಸ್ಯರಾದ ನಾರಾಯಣಪ್ಪನವರು ತಿಳಿಸಿದ್ದಾರೆ.
ಮಹಾತ್ಮ ಗಾಧಿ ನರೇಗಾ ಯೋಜನೆಯನ್ನು ಬಳಸಿಕೊಂಡು ಖಂಡಿಕಾ ಗ್ರಾಮ ಪಂಚಾಯ್ತಿ ಉತ್ತಮ ಕೆಲಸಕ್ಕೆ ಕೈ ಹಾಕಿದೆ. ಪ್ರತಿಯೊಬ್ಬರಿಗೂ ಅಗತ್ಯವಾದ ನೀರನ್ನು ಉಳಿಸಲು ಮತ್ತು ಸಂರಕ್ಷಿಸಲು ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯಾಗಿದೆ ಎಂದು ಗ್ರಾಮಸ್ಥರಾದ ಮಹಾಲೇಶ್ವರನಾಯ್ಕ ಅವರು ತಿಳಿಸಿದ್ದಾರೆ.
ನಗರೀಕರಣ ಆದಂತೆಲ್ಲಾ ಸಾರ್ವಜನಿಕ ಪ್ರದೇಶಗಳ ಸುತ್ತಮುತ್ತಲಿನ ನೀರಿನ ಮೂಲವಾದ ಕೆರೆಗಳು ಒತ್ತುವರಿಯಾಗಿ ನಶಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೆರೆಗಳನ್ನು ನಿರ್ಮಿಸುವುದು ಮತ್ತು ಇರುವ ಕೆರೆಗಳನ್ನು ಪುನರುಜ್ಜೀವನಗೋಳಿಸಿ, ಮುಂದಿನ ಪೀಳಿಗೆಗೆ ನೀರನ್ನು ಸಂರಕ್ಷಿಸಿಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಜೀವಜಲದ ಮೂಲಗಳು ಕಣ್ಮರೆಯಾಗುತ್ತಿರುವ ಈ ಸಮಯದಲ್ಲಿ ಮಾದರಿಯೆಂಬಂತೆ ಖಂಡಿಕಾ ಗ್ರಾಮ ಪಂಚಾಯ್ತಿ ಹಾಗು ಕುಗ್ವೆ ಗ್ರಾಮದ ಮಹಿಳೆಯರು ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಂಡು ಹೊಸ ಕೆರೆಯನ್ನು ನಿರ್ಮಿಸಿ ಇತರರಿಗೂ ಪ್ರೇರಣೆಯಾಗಿದ್ದಾರೆ.
ವರದಿ: ರಿಥೇಶ ನಾಯ್ಕ್
ಅಪ್ರೆಂಟೀಸ್, ವಾರ್ತಾ ಇಲಾಖೆ ಶಿವಮೊಗ್ಗ