ಕೊರೋನಾ ರೋಗಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ್ದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ. ರೋಗಿಗಳಿಂದ ಪಡೆದ ಹಣ ಮರಳಿ ನೀಡುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ರೋಗಿಗಳಿಂದ ಹೆಚ್ಚುವರಿ ಹಣ ಪಡೆದ ರಾಜ್ಯದ 577 ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ಸಾರ್ವಜನಿಕರಿಂದ ಇಲಾಖೆಗೆ ಬಂದ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿದ ಇಲಾಖೆ ಆ ನಿಟ್ಟಿನಲ್ಲಿ ನೋಟಿಸ್ ಜಾರಿಗೊಳಿಸಿ ಇಲಾಖೆ ಕ್ರಮ ಕೈಗೊಂಡಿದೆ.
ಈ ಬಗ್ಗೆ ದೂರುಗಳು ಸಲ್ಲಿಕೆಯಾದ ನಂತರ ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ಡಾ. ಕೆ. ಸುಧಾಕರ್ ಅವರು ಸೂಚಿಸಿದ್ದರು.
ಅದರಂತೆ ಇಲಾಖೆಯು ಕೊರೋನಾ ರೋಗಿಗಳಿಂದ ಶುಲ್ಕ ಪಡೆಯುವುದರ ಜೊತೆಗೆ, ಸರ್ಕಾರದಿಂದಲೂ ಹಣ ಪಡೆದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ವಹಿಸಲಾಗಿದೆ.
ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಮೂಲಕ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. 577 ಆಸ್ಪತ್ರೆಗಳು 403 ರೋಗಿಗಳ ಕುಟುಂಬಗಳಿಗೆ 1,58,22,359 ರೂ. ಹಣವನ್ನು ಮರಳಿ ನೀಡಬೇಕು ಎಂದು ಈಗಾಗಲೇ ತಿಳಿಸಿದೆ.
ಈ ಕುರಿತು ಮಾತನಾಡಿರುವ ಸಚಿವ ಸುಧಾಕರ್, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ರೆಫರಲ್ ಆಧಾರದಲ್ಲಿ ಕೊರೋನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಹಿಂದೆಯೇ ಕ್ರಮ ವಹಿಸಲಾಗಿತ್ತು. ಕೊರೋನಾ ರೋಗಿಗಳ ಕುಟುಂಬಕ್ಕೆ ನೆರವಾಗುವ ಸದುದ್ದೇಶದಿಂದ ಸರ್ಕಾರ ಈ ಪ್ರಯೋಜನವನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.