ಪಂಚರಾಜ್ಯಗಳ ಚುನಾವಣೆ ಪ್ರಚಾರ ಕಾವು ತಾರಕಕ್ಕೇರಿದೆ. ಮತದಾರರ ಮನವೊಲಿಸಲು ಪ್ರಮುಖ ಪಕ್ಷಗಳು ಎಲ್ಲಿಲ್ಲದ ಕಸರತ್ತು ನಡೆಸಿವೆ. ಪೈಪೋಟಿಯ ಮೇಲೆ ಆಮಿಷಗಳ ಸುರಿಮಳೆಯಾಗುತ್ತದೆ. ಉತ್ತರಪ್ರದೇಶದಲ್ಲಿ ಉಚಿತ ವಿದ್ಯುತ್ ನಿಂದ ಹಿಡಿದು ರೈತರ ಸಾಲ ಮನ್ನಾ ಆಗುವವರೆಗೂ ಭರವಸೆಗಳನ್ನು ಪಕ್ಷಗಳು ಪ್ರಣಾಳಿಕೆಗಳಲ್ಲಿ ಪ್ರಕಟಿಸಿದೆ. ಇದು ಎಲ್ಲರಲ್ಲೂ ಕುತೂಹಲವನ್ನು ಮೂಡಿಸಿದೆ.
ಉತ್ತರಪ್ರದೇಶದಲ್ಲಿ ದಶಕಗಳಿಂದ ನೆಲಕಚ್ಚಿರುವ ಕಾಂಗ್ರೆಸ್ ಪಾಲಿಗೆ ಈ ಬಾರಿಯೂ ಅಂತಹ ಭರವಸೆ ಇಟ್ಟುಕೊಳ್ಳುವ ಪರಿಸ್ಥಿತಿ ಇಲ್ಲ. ಆದರೂ ನಿರಾಶೆ ಗೊಳ್ಳದ ಪಕ್ಷ ಆಕರ್ಷಕ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. ವಿಶೇಷವಾಗಿ ಯುವಜನರು ಮತ್ತು ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಸಿದ್ಧಪಡಿಸಿರುವ ಪ್ರಣಾಳಿಕೆಯನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ಪ್ರಿಯಾಂಕ ವಾದ್ರಾ ಅವರು ಬಿಡುಗಡೆ ಮಾಡಿದ್ದಾರೆ.
ಸಾರ್ವಜನಿಕ ಸಂಸ್ಥೆಗಳಲ್ಲಿ ಬಾಕಿ ಉಳಿದಿರುವ 20 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಇದರ ಲಾಭ ನೇರವಾಗಿ ಯುವಜನರಿಗೆ ದಕ್ಕಲಿದೆ. 20 ಲಕ್ಷದಲ್ಲಿ 8 ಲಕ್ಷ ಮಹಿಳೆಯರಿಗೆ ಮೀಸಲಿಡಲಾಗಿದೆ. ವಿದ್ಯಾರ್ಥಿಗಳೇ ಎಲ್ಲಾ ರೀತಿಯ ಪರೀಕ್ಷೆ ಅರ್ಜಿ ಶುಲ್ಕ ಮನ್ನಾ, ಉಚಿತ ಬಸ್ ಮತ್ತು ರೈಲು ಪಾಸ್ ವಿತರಣೆ ಭರವಸೆ ನೀಡಲಾಗಿದೆ. ಯುವಜನರನ್ನು ವ್ಯಸನ ಮುಕ್ತಗೊಳಿಸಲು ರಾಜ್ಯಾದ್ಯಂತ ಹಲವು ಕಡೆ ಡ್ರಗ್ಸ್ ವ್ಯಸನ ವಿಮೋಚನಾ ಕೇಂದ್ರಗಳನ್ನು ಆರಂಭಿಸುವ ಸಂಕಲ್ಪ ಮಾಡಿದೆ. ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಬಿದ್ದಿರುವ 1.5 ಲಕ್ಷ ಶಿಕ್ಷಕರ ಹುದ್ದೆಗಳ ಭರ್ತಿಗೆ ಭರವಸೆ ನೀಡಿದೆ.