ಬೆಳಗಾವಿ: ರಾಜ್ಯದಲ್ಲಿ ವಿಶ್ವವಿದ್ಯಾಲಯಗಳು ಇಲ್ಲದ ಜಿಲ್ಲಾ ಕೇಂದ್ರಗಳಲ್ಲಿ ಆದಷ್ಟು ತ್ವರಿತವಾಗಿ ವಿ.ವಿ.ಗಳನ್ನು ಸ್ಥಾಪಿಸಲಾಗುವುದು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಲೆ ಎತ್ತಲಿರುವ ಈ ವಿ.ವಿ.ಗಳಲ್ಲಿ ಕುಲಪತಿಯೂ ಸೇರಿದಂತೆ ಗರಿಷ್ಠ 25 ಸಿಬ್ಬಂದಿ ಮಾತ್ರ ಇರಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಆವರಣದಲ್ಲಿ ಬುಧವಾರ ನಡೆದ `ಜ್ಞಾನಯಜ್ಞ ಫೆಲೋಶಿಪ್ ವಿತರಣೆ ಮತ್ತು ವಿದ್ಯುನ್ಮಾನ ಪ್ರಮಾಣಪತ್ರಗಳ ಸೇವಾ ವ್ಯವಸ್ಥೆ’ (ಎಲೆಕ್ಟ್ರಾನಿಕ್ ಡಾಕ್ಯುಮೆಂಟರಿ ಡೆಲಿವರಿ) ಹಾಗೂ ಟ್ರ್ಯಾಕಿಂಗ್ ವ್ಯವಸ್ಥೆಯ ಉದ್ಘಾಟನೆ ನೆರವೇರಿಸಿ ಅವರು ಬುಧವಾರ ಮಾತನಾಡಿದರು.
`ನೂರಾರು ಎಕರೆ ವಿಶಾಲವಾದ ಕ್ಯಾಂಪಸ್ಸುಗಳು ಈಗ ಅಪ್ರಸ್ತುತವಾಗುತ್ತಿವೆ. ಆಧುನಿಕ ತಂತ್ರಜ್ಞಾನವು ಸಮರ್ಥವಾಗಿದ್ದು, ತುಂಬಾ ಕಡಿಮೆ ಜಾಗದಲ್ಲಿ ವಿ.ವಿ.ಗಳನ್ನು ಸ್ಥಾಪಿಸಲು ಈಗ ಸಾಧ್ಯವಿದೆ. ದೊಡ್ಡದೊಡ್ಡ ವಿ.ವಿ.ಗಳನ್ನು ಆರಂಭಿಸುವ ಬದಲು ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ವಿಶ್ವವಿದ್ಯಾಲಯಗಳು ಇರುವಂತೆ ನೋಡಿಕೊಳ್ಳುವುದಕ್ಕೆ ಸರಕಾರದ ಆದ್ಯತೆ ಕೊಟ್ಟಿದೆ’ ಎಂದು ಅವರು ನುಡಿದರು.
ಇದರೊಂದಿಗೆ ಬೆಂಗಳೂರಿನಲ್ಲಿರುವ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜನ್ನು (ಯುವಿಸಿಇ) ಮುಂಬೈನ ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕಾಗಿ 10 ವರ್ಷಗಳ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
120 ಎಕರೆ ವಿಶಾಲವಾಗಿರುವ ಬೆಳಗಾವಿಯ ವಿಟಿಯು ಕೂಡ ಐಐಟಿ ಮಾದರಿಯಲ್ಲೇ ಬೆಳೆಯಬೇಕು. ಈ ನಿಟ್ಟಿನಲ್ಲಿ ಕುಲಪತಿ ಪ್ರೊ.ಕರಿಸಿದ್ಧಪ್ಪನವರು ಇನ್ನು ಒಂದು ತಿಂಗಳಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ, ಸರಕಾರಕ್ಕೆ ಸಲ್ಲಿಸಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು.
ಹಾಗೆಯೇ ರಾಜ್ಯದಲ್ಲಿರುವ 17 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಎಂಜಿನಿಯರಿಂಗ್ ಓದುವವರು ಸಹಜವಾಗಿಯೇ ಈ ಕಾಲೇಜುಗಳತ್ತ ಆಕರ್ಷಿತವಾಗುವಂತೆ ಇವುಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಇವುಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುವುದರ ಜತೆಗೆ ಆಡಳಿತ ಮಂಡಳಿಯನ್ನೂ ಸ್ಥಾಪಿಸಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದರು.
ಸಮಾರಂಭದಲ್ಲಿ ವಿಟಿಯು ಕುಲಪತಿ ಪ್ರೊ,ಕರಿಸಿದ್ಧಪ್ಪ, ಕುಲಸಚಿವರಾದ ಪ್ರೊ.ಬಿ.ಇ.ರಂಗಸ್ವಾಮಿ, ಪ್ರೊ.ಎ.ಎಸ್.ದೇಶಪಾಂಡೆ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಮುಂತಾದವರು ಉಪಸ್ಥಿತರಿದ್ದರು.
ವಿಟಿಯು ಹಮ್ಮಿಕೊಂಡಿರುವ ಜ್ಞಾನಯಾನ ಫೆಲೋಶಿಪ್ ಕಾರ್ಯಕ್ರಮದಡಿ ಸಚಿವರು 22 ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಪತ್ರ ವಿತರಿಸಿದರು.
ಈ ಯೋಜನೆಯಡಿ ಪ್ರತಿ ವಿದ್ಯಾರ್ಥಿಗೂ ತಿಂಗಳಿಗೆ 25 ಸಾವಿರ ರೂ. ನೀಡಲಾಗುವುದು. ಆಯ್ಕೆಯಾಗಿರುವ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್, ನ್ಯಾನೊ ತಂತ್ರಜ್ಞಾನ, ಏರೋಸ್ಪೇಸ್ ಪ್ರೊಪಲ್ಶನ್ ಎಂಜಿನಿಯರಿಂಗ್ ಮುಂತಾದ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವವರು ಇದ್ದಾರೆ ಎಂದು ಅವರು ತಿಳಿಸಿದರು.
ವಿಟಿಯು ಆರಂಭಿಸಿರುವ ಈ ಯೋಜನಯಡಿ ವಿದ್ಯಾರ್ಥಿಗಳು ತಮಗೆ ಬೇಕಾದ ಪ್ರಮಾಣಪತ್ರ, ಸಂಭಾವ್ಯ ಪದವಿ ಪ್ರಮಾಣ ಪತ್ರ, ಅಂಕಪಟ್ಟಿ, ವರ್ಗಾವಣೆ ಪತ್ರ, ಹೆಸರು ಬದಲಾವಣೆ, ದಾಖಲಾತಿಗಳ ಪರಿಶೀಲನೆ, ಮಾಧ್ಯಮ ಆಯ್ಕೆ ಮುಂತಾದ ಹತ್ತಾರು ಸೇವೆಗಳನ್ನು ಆನ್ಲೈನ್ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಅಶ್ವತ್ಥನಾರಾಯಣ ಹೇಳಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.