ದೊಡ್ಮನೆ ಹುಡುಗ ಎಂದೇ ಖ್ಯಾತಿಯಾಗಿರುವ ನಟ ದಿ. ಪುನೀತ್ ರಾಜಕುಮಾರ್ ಅವರು ನಮ್ಮನ್ನಗಲಿ ಸುಮಾರು ಒಂದು ತಿಂಗಳು ಕಳೆದಿದೆ. ಆದರೂ ಸಹ ಅವರ ಅಭಿಮಾನಿಗಳು ಹಾಗೂ ಕುಟುಂಬವರ್ಗದವರು ನೋವಿನಲ್ಲೇ ಇದ್ದಾರೆ.
ಪುನೀತ್ ರಾಜಕುಮಾರ್ ಅವರ ತಿಂಗಳ ಪುಣ್ಯಸ್ಮರಣೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ಅವರ ಪತ್ನಿ ಅಶ್ವಿನಿ ಸೇರಿದಂತೆ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುನೀತ್ ಅವರ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಕುರಿತು ರಾಘವೇಂದ್ರ ರಾಜಕುಮಾರ್ ಮಾತನಾಡಿದರು. ಗಂಧದಗುಡಿ ಬಂದು ಸಾಕ್ಷ್ಯಚಿತ್ರ. ಅದನ್ನು ಅಪ್ಪು ಅವರು ಪುನೀತ್ ರಾಜಕುಮಾರ ಆಗಿ ಮಾಡಿಲ್ಲ. ಬದಲಾಗಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಯಾವುದೇ ಮೇಕಪ್ ಇಲ್ಲದೆ ನಟಿಸಿ, ಉತ್ತಮ ಸಂದೇಶವನ್ನು ನೀಡಿದ್ದಾರೆ. ಅದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ವನ್ಯಜೀವಿ, ವನ್ಯಲೋಕ ಎಷ್ಟು ಪ್ರಮುಖ ಹಾಗೂ ಅದರ ರಕ್ಷಣೆ ಎಷ್ಟು ಮುಖ್ಯ ಎನ್ನುವುದು ಇದರಲ್ಲಿದೆ. ಹಾಗೂ ಕಾಡು ನಾಶ ತಡೆ ಮತ್ತು ಬುಡಕಟ್ಟು ಜನರ ಬಗ್ಗೆ ಇಲ್ಲಿ ಮಾಹಿತಿ ಇದೆ. ಇಡೀ ಪ್ರಪಂಚಕ್ಕೆ ಇದು ಅನ್ವಯಿಸುತ್ತದೆ. ಅಪ್ಪು ಬಿಟ್ಟುಹೋಗಿರುವ ಕೊನೆಯ ಆಸ್ತಿ ಇದಾಗಿದೆ ಎಂದರು.
ಯಾವುದೇ ಸಹಾಯ ಮಾಡಿದರು ಅದು ಬೇರೆಯವರಿಗೆ ಗೊತ್ತಾಗಬಾರದು ಎಂಬ ದಾರಿಯಲ್ಲಿ ಅಪ್ಪು ನಡೆದಿದ್ದಾರೆ. ನಾವು ಅವರ ಕೆಲಸವನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ಬಹಿರಂಗವಾಗಿ ಹೇಳಿದರೆ ಆತನಿಗೆ ದ್ರೋಹ ಮಾಡಿದ ಹಾಗೆ ಆಗುತ್ತದೆ. ಅಪ್ಪುವಿನ ಕನಸು ಹಾಗೂ ಕೆಲಸಗಳನ್ನು ಪ್ರತಿಯೊಬ್ಬರು ನಡೆಸಿಕೊಂಡು ಹೋಗುತ್ತೇವೆ. ಅಪ್ಪು ವ್ಯಕ್ತಿತ್ವ ಎಲ್ಲರ ಗಮನ ಸೆಳೆದಿದೆ. ಈ ಗುಣವನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಪ್ಪು ಪಡೆದಿದ್ದರು. ಇದು ನಮ್ಮ ತಂದೆಯ ಗುಣ. ಇಷ್ಟು ಬೇಗ ನಮ್ಮನ್ನಗಲಿ ಹೋಗಲು ನಮ್ಮ ಪ್ರೀತಿ ಜಾಸ್ತಿ ಆಯ್ತಾ ಅಥವಾ ಅವರಿಗೆ ಪ್ರೀತಿ ಸಾಲಲ್ಲ ಇಲ್ಲವೇ ಎಂದು ತಿಳಿಯುತ್ತಿಲ್ಲ ಎಂದು ರಾಘವೇಂದ್ರ ರಾಜಕುಮಾರ್ ಭಾವುಕರಾಗಿ ನುಡಿದರು.