ಕಲಿಮ್ ಉಲ್ಲಾ ಮೂಲತಃ ತರಿಕೆರೆಯವರು. ಶಿವಮೊಗ್ಗದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡದ ಮೇಷ್ಟ್ರು. ಕಥೆ, ಪ್ರಬಂಧ, ಲೇಖನಗಳ ಜೊತೆಗೆ ವೈಲ್ಡ್ ಲೈಫ್ ಫೋಟೋಗ್ರಫಿ ಇವರ ಹವ್ಯಾಸಗಳು. ತರಗತಿಗಳಲ್ಲಿ ನ ಇವರ ಜೀವನಾನುಭವಗಳು ಪ್ರಜಾವಾಣಿ ಪತ್ರಿಕೆಯಲ್ಲಿ “ಕ್ಲಾಸ್ ಟೀಚರ್” ಎಂಬ ಅಂಕಣವಾಗಿ ಸಾಕಷ್ಟು ಹೆಸರು ಮಾಡಿತು. ಮುಂದೆ ಕ್ಲಾಸ್ ಟೀಚರ್ ಹೆಸರಿನ ಪುಸ್ತಕ ಪ್ರಕಟಗೊಂಡು ಜನಪ್ರಿಯವಾಗಿ ಎರಡು ಮುದ್ರಣಗಳನ್ನು ಕಂಡಿದೆ. 2016ನೇ ಸಾಲಿನ ರಾಜ್ಯಮಟ್ಟದ ಮುಸ್ಲಿಂ ಸಾಹಿತ್ಯ ಪ್ರಶಸ್ತಿಯನ್ನೂ ಗಳಿಸಿದ ಈ ಕೃತಿಯ ಎರಡು ಪ್ರಬಂಧಗಳು ಕ್ರಮವಾಗಿ ಕುವೆಂಪು ಹಾಗೂ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ಪಠ್ಯಪುಸ್ತಕಗಳ ಭಾಗವಾಗಿವೆ. ಕಲಿಮ್ ಉಲ್ಲಾ ಪೂರ್ಣಚಂದ್ರ ತೇಜಸ್ವಿಯವರ ಕಥನಗಳ ಮೇಲೆ ವಿಶೇಷ ಸಂಶೋಧನೆ ಮಾಡಿ ಎಂ.ಫಿಲ್. ಹಾಗೂ ಪಿ.ಹೆಚ್.ಡಿ. ಗಳಿಸಿದ್ದಾರೆ.
ವನ್ಯ ಪ್ರಾಣಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಎಂದರೆ ಜೀವನ ಮರಣದ ಸವಾಲು. ಅಂತಹ ರೋಚಕ ಕ್ಷಣವನ್ನು ಇವರ ಬರಹದಲ್ಲಿ ಕಾಣಬಹುದು.
ಫೋಟೋಗ್ರಫಿಯ ರೋಚಕ ಕ್ಷಣಗಳು
ಫೊಟೋಗ್ರಫಿಯ ಹುಚ್ಚು ನೆತ್ತಿಗೇರಿದ ನಂತರ ನಾ ಹಿಡಿದ ಹಾದಿ ಕಾಡಾಗಿತ್ತು. ಕಾಡಿನ ಬದುಕೇ ಒಂದು ರೋಚಕ ಅನುಭವ. ಮನುಷ್ಯ ಲೋಕ ಕೊಡುವ ಮಾಲಿನ್ಯಗಳ ಮರೆಸುವ ಮದ್ದು ಕಾಡ ಮಡಿಲು ಕೊಡಬಲ್ಲದು. ನಮಗೆ ಬೇಕಾದ ಹಕ್ಕಿಯನ್ನೋ ಪ್ರಾಣಿಯನ್ನೋ ಹಾವನ್ನೋ ಹುಡುಕುವ ತವಕವೇ ಒಂದು ರೋಮಾಂಚನ. ಬಯಸಿದ್ದು ಸಿಕ್ಕರೆ ಮತ್ತಷ್ಟು ಖುಷಿ. ಸಿಗದೆ ಹೋದರೆ ಆ ವಿರಹವೂ ಒಂದು ಸವಿ. ಕೆಲವೊಮ್ಮೆ ನಿರೀಕ್ಷಿಸದ ಮತ್ತೇನೋ ಸಿಕ್ಕು ಹುಟ್ಟುವ ಸಂತಸ ಹೇಳತೀರದ್ದು. ಬದುಕು ಸದಾ ಅನಿರೀಕ್ಷಿತಗಳ ಬಯಸುತ್ತದೆ. ಮನಸ್ಸು ಹೊಸದನ್ನು ಹುಡುಕುತ್ತದೆ. ಇದೆಲ್ಲಾ ನನಗೀಗ ಸಿಗುತ್ತಿರುವುದು ಕ್ಯಾಮೆರಾ ಹೊತ್ತು ನಡೆದ ಮೇಲೆಯೇ.
ಒಮ್ಮೆ ಹಿಮಾಲಯದ ಸೆರಗಲ್ಲಿ ನಿಂತು ಗೋಲ್ಡ್ ಪಿಂಚ್ ಎಂಬ ಬಣ್ಣದ ಹಕ್ಕಿಗಾಗಿ ಕಾಯುತ್ತಿದೆ. ಅಕಸ್ಮಾತ್ ಕಾಲ ಕೆಳಗೊಮ್ಮೆ ಬಗ್ಗಿ ನೋಡಿದಾಗ ಅಚ್ಚರಿ ಯಾಯಿತು. ಅವು ಪ್ರಾಣಿಯ ಕಾಲಿನ ಹೆಜ್ಜೆಯ ಗುರುತುಗಳಾಗಿದ್ದವು. ನಾನು ಬರುವ ಕೆಲವೇ ನಿಮಿಷಗಳ ಮೊದಲು ಅಲ್ಲಿಂದ ಹಿಮ ಚಿರತೆಯೊಂದು ಹಾದು ಹೋಗಿತ್ತು. ನಾನೊಮ್ಮೆ ಸಿಕ್ಕಿದ್ದರೆ ನನ್ನ ಫೋಟೋಗೆ ಮಾಲೆ ಆ ದಿನವೇ ಖಂಡಿತಾ ಬಿದ್ದಿರುತ್ತಿತ್ತು!
ಮತ್ತೊಮ್ಮೆ ಬೆಳ್ಳಂಬೆಳಗ್ಗೆ ಗಣೇಶ ಗುಡಿಯಲಿ ನಡೆದು ಹೋಗುವ ದಾರಿಯಲ್ಲಿ ಮಂಜು ಕವಿದಿತ್ತು. ಅಸ್ಪಷ್ಟ ಆಕೃತಿಗಳು ಓಡಾಡುತ್ತಿದ್ದವು. ಮೊದಲಿಗೆ ಅವು ಊರ ನಾಯಿಗಳರಬಹುದೆಂದು ಅಂದಾಜಿಸಿದೆ. ಕ್ಯಾಮೆರಾ ಹಿಡಿದು ಒಂದು ಚಿತ್ರ ತೆಗೆದು ನೋಡಿದಾಗ ಅವು ಚಿರತೆಗಳೆಂದು ಗೊತ್ತಾಯಿತು. ತಾಯಿ ತನ್ನ ಮೂರು ಮರಿಗಳ ಜೊತೆ ಆಟವಾಡುತ್ತಿತ್ತು. ನನಗೆ ತಿರುಗಿ ಓಡುವುದೋ, ನಿಂತು ಪಟ ತೆಗೆಯುವುದೋ? ಗೊತ್ತಾಗದೆ ಅರೆ ಕ್ಷಣದಲ್ಲಿ ಜೀವ ಬಾಯಿಗೆ ಬಂದಿತ್ತು. ಆದದ್ದಾಗಲಿ ಎಂದು ಭಂಡ ದೈರ್ಯ ಮಾಡಿ ಫೋಟೋ ತೆಗೆದೆ. ನನ್ನಷ್ಟೇ ಗಾಬರಿಯಾಗಿದ್ದ ಮರಿ ಚಿರತೆ ದೂರದಲ್ಲಿ ಕೂತು ನನ್ನನ್ನೇ ದಿಟ್ಟಿಸುತ್ತಿತ್ತು. ಫೊಟೋಗ್ರಫಿಯ ನಿಜವಾದ ರೋಚಕತೆ ಅರ್ಥವಾಗಿದ್ದು ಆಗಲೇನೆ.
ಮತ್ತೊಮ್ಮೆ ಜೀಪಿನಲ್ಲಿ ಕೂತು ಪಟ ತೆಗೆಯುವಾಗ ಚಿರತೆ ನನ್ನ ಕಡೆಗೇ ನಡೆದು ತೀರ ಹತ್ತಿರಕ್ಕೆ ಬಂದಿತು. ನಾನು ಜಿದ್ದಿಗೆ ಬಿದ್ದು ಕ್ಲಿಕ್ಕಿಸುತ್ತಲೇ ಇದ್ದೆ. ಮತ್ತೊಮ್ಮೆ ಆಗಿದ್ದಾಗಲಿ ಎಂಬ ಜಗಭಂಡತನ. ತೀರಾ ಸಮೀಪಕ್ಕೆ ಬಂದು ಪಕ್ಕದಿಂದ ಹಾದು ಹೋದ ಮೇಲೆ ಭಯವಾಗಿದ್ದಂತೂ ನಿಜ. ಕ್ಯಾಮೆರಾ ಕೊಡುವ ಹುರುಪು, ದೈರ್ಯಗಳು ಸರಿಯೋ ತಪ್ಪೋ ಗೊತ್ತಿಲ್ಲ. ಮತ್ತೊಮ್ಮೆ ಆನೆ ಅಟ್ಟಿಸಿಕೊಂಡು ಬಂದಾಗ ಹಠಕ್ಕೆ ಬಿದ್ದು ಪಟ ಕ್ಕಿಕ್ಕಿಸುತ್ತಲೇ ಇದ್ದೆ. ಕೊನೆ ಗಳಿಗೆಯಲ್ಲಿ ಅಂತೂ ಬಚಾವು. ಇಂತಹ ಅನೇಕ ಸಂಗತಿಗಳು ವೈಲ್ಡ್ ಲೈಫ್ ಫೋಟೋಗ್ರಫಿಯಲ್ಲಿ ನಡೆಯುತ್ತಲೇ ಇರುತ್ತವೆ.
ಪರಿಚಯ: