ತಮ್ಮ ಮುಗ್ಧ ನಗುವಿನ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ನಟ ಪುನೀತ್ ರಾಜ್ ಕುಮಾರ್ ರವರು ನಿನ್ನೆ ಅಸುನೀಗಿದ್ದಾರೆ.
ಅವರಿಗೆ 46 ವರ್ಷ ವಯಸ್ಸಾಗಿತ್ತು. ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ನಟ ಪುನೀತ್ ರಾಜಕುಮಾರ್ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕವನ್ನು ತ್ಯಜಿಸಿದ್ದಾರೆ.
ಪುನೀತ್ ರಾಜಕುಮಾರ್ ಅವರು ಬೆಳಿಗ್ಗೆಯಿಂದ ಜಿಮ್ ಗೆ ತೆರಳಿ, ಅಲ್ಲಿ ಎರಡು ಗಂಟೆ ವ್ಯಾಯಾಮ ಮಾಡಿದ್ದರು. ಆಗ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಕುಟುಂಬದ ವೈದ್ಯರ ಬಳಿ ಹೋಗಿದ್ದರು.ಇಸಿಜಿ ಪರೀಕ್ಷೆ ನಡೆಸಿದಾಗ ಹೃದಯಘಾತ ಆಗಿರುವುದು ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗೆ ವಿಕ್ರಂ ಆಸ್ಪತ್ರೆಗೆ ಬರುವಾಗ ಮಾರ್ಗ ಮಧ್ಯದಲ್ಲಿಯೇ ಹೃದಯದ ಚುಟುವಟಿಕೆಗೆ ಸ್ತಬ್ಧವಾಗಿತ್ತು. ಹೃದಯವು ತುಂಬಾ ದುರ್ಬಲವಾಗಿತ್ತು. ಮೂರು ಗಂಟೆಗಳು ತಜ್ಞ ವೈದ್ಯರು ಚಿಕಿತ್ಸೆ ನೀಡಿದರೂ ಅವರ ದೇಹ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವಿಕ್ರಮ್ ಆಸ್ಪತ್ರೆ ಹೃದ್ರೋಗ ತನ್ನ ಡಾಕ್ಟರ್ ರಂಗನಾಥ್ ನಾಯಕ್ ತಿಳಿಸಿದ್ದಾರೆ.
ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ಕನ್ನಡ ಸಿನಿಮಾ ಲೋಕಕ್ಕೆ ಮಾತ್ರವಲ್ಲದೆ ಇಡೀ ಭಾರತೀಯ ಸಿನಿಮಾರಂಗಕ್ಕೆ ಆದ ನಷ್ಟವಾಗಿದೆ.
ಕುಟುಂಬದವರು, ಕೋಟ್ಯಾಂತರ ಅಭಿಮಾನಿಗಳು, ಬಂಧು ಮಿತ್ರರು, ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ತಂದೆಯ ಹಾದಿಯಲ್ಲಿ ಸಾಗಿರುವ ಪುನೀತ್, ನೇತ್ರದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಗಣ್ಯರು, ಚಿತ್ರರಂಗದವರು, ಕೋಟ್ಯಾಂತರ ಅಭಿಮಾನಿ ಬಳಗದವರು ಶೋಕದಲ್ಲಿ ಮುಳುಗಿದ್ದು, ಸಂತಾಪ ಸೂಚಿಸಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಅಂತ್ಯಸಂಸ್ಕಾರ ಕ್ರಿಯೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಅಭಿಮಾನಿಗಳು ಶಾಂತ ರೀತಿಯಿಂದ ಪುನೀತ್ ಅವರನ್ನು ಕಳುಹಿಸಿ ಕೊಡಬೇಕೆಂದು ರಾಘವೇಂದ್ರ ರಾಜಕುಮಾರ್, ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವರು ವಿನಂತಿ ಮಾಡಿದ್ದಾರೆ.
ಸಾವಿನಲ್ಲೂ ಸಾರ್ಥಕತೆ ಮೆರೆದ “ಅಪ್ಪು”
Date: